ನ್ಯೂಯಾರ್ಕ್: ತನ್ನ ದೇಶದಲ್ಲಿನ ಘೋಷಿತ ಉಗ್ರವಾದಿಗಳ ಪಟ್ಟಿಯಿಂದ ಸಾವಿರಾರು ಹೆಸರುಗಳನ್ನು ಸದ್ದಿಲ್ಲದೇ ಅಳಿಸಿ ಹಾಕಿದೆ ಪಾಕಿಸ್ತಾನ. 2008ರ ಮುಂಬೈ ಅಟ್ಯಾಕ್ ಮಾಸ್ಟರ್ಮೈಂಡ್ ಹಾಗೂ ಲಷ್ಕರ್-ಎ-ತೊಯ್ಬಾ ಕಮಾಂಡರ್ ಝಕಿಯುರ್ ರೆಹಮಾನ್ ಲಖ್ವಿ ಹೆಸರನ್ನೂ ಪಾಕ್ ಉಗ್ರವಾದಿಗಳ ಪಟ್ಟಿಯಿಂದ ತೆಗೆದಿದೆ. ಜಾಗತಿಕ ಅಕ್ರಮ ಹಣ ವರ್ಗಾವಣೆಯ ಮೇಲೆ ನಿಗಾ ಇಡುವ ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ನ (FATF) ಪರಿಶೀಲನಾ ಅವಧಿ ಹತ್ತಿರವಾಗುತ್ತಿದ್ದಂತೆಯೇ ಪಾಕ್ ತನ್ನ ಕುತಂತ್ರ ಬುದ್ಧಿಯ ಕೆಲಸಕ್ಕೆ ಕೈಹಾಕಿದೆ.
ಉಗ್ರವಾದಿಗಳಿಗೆ ಅಕ್ರಮ ದಾರಿಗಳ ಮೂಲಕ ಹಣ ವರ್ಗಾವಣೆಯಾಗುತ್ತಿರುವುದನ್ನು ನಿಲ್ಲಿಸಲು ಪಾಕ್ನಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಫ್ಎಟಿಎಫ್ ಪಾಕಿಸ್ತಾನವನ್ನು ತನ್ನ ಪಟ್ಟಿಯ ಗ್ರೇ ಲಿಸ್ಟ್ (ಅತ್ಯಂತ ಕಳಪೆ) ನಲ್ಲಿಟ್ಟಿದೆ. ಗ್ರೇ ಲಿಸ್ಟ್ನಲ್ಲಿ ಮುಂದುವರೆದಲ್ಲಿ ಅಮೆರಿಕ ಹಾಗೂ ಇನ್ನೂ ಕೆಲ ಅಂತಾರಾಷ್ಟ್ರೀಯ ಮೂಲಗಳಿಂದ ಬರುವ ಸಹಾಯಧನ ಸಂಪೂರ್ಣವಾಗಿ ನಿಲ್ಲಲಿದೆ. ಇದರಿಂದ ಮೊದಲೇ ಪಾತಾಳ ಕಂಡಿರುವ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿಗೆ ಮತ್ತೊಂದು ದೊಡ್ಡ ಹೊಡೆತ ಬೀಳಲಿದೆ.