ಇಸ್ಲಾಮಾಬಾದ್ :ತಾಲಿಬಾನ್ ಆಳ್ವಿಕೆಯಲ್ಲಿರುವ ಆಫ್ಘಾನಿಸ್ತಾನದಲ್ಲಿ ಗುಪ್ತಚರ ಕಾರ್ಯಾಚರಣೆಗೆ ತನ್ನ ವಾಯುಪ್ರದೇಶವನ್ನು ಬಳಸಿಕೊಳ್ಳುವ ಕುರಿತು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿರುವ ವರದಿಗಳನ್ನು ಪಾಕಿಸ್ತಾನ ತಿರಸ್ಕರಿಸಿದೆ.
ಆಫ್ಘಾನಿಸ್ತಾನದ ವಿರುದ್ಧ ಮಿಲಿಟರಿ ಮತ್ತು ಗುಪ್ತಚರ ಕಾರ್ಯಾಚರಣೆಗಳನ್ನು ನಡೆಸಲು ಉಭಯ ದೇಶಗಳ ನಡುವಿನ ಒಪ್ಪಂದ ಔಪಚಾರಿಕಗೊಳಿಸುವುದನ್ನು ಉಲ್ಲೇಖಿಸಿರುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪಾಕ್ ವಿದೇಶಾಂಗ ಕಚೇರಿ, ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.
ಆದರೂ, ಪಾಕ್-ಅಮೆರಿಕ ಪ್ರಾದೇಶಿಕ ಭದ್ರತೆ ಮತ್ತು ಭಯೋತ್ಪಾದನೆ ಕುರಿತು ದೀರ್ಘಕಾಲದ ಸಹಕಾರವನ್ನ ಹೊಂದಿವೆ ಎಂದು ಹೇಳಿದೆ. ಆಫ್ಘಾನಿಸ್ತಾನದಲ್ಲಿ ಕಾರ್ಯಾಚರಣೆ ನಡೆಸಲು ಅಮೆರಿಕ ತನ್ನ ವಾಯುಪ್ರದೇಶವನ್ನು ಬಳಸಲು ಪಾಕಿಸ್ತಾನದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದೆ ಎಂದು ಅಮೆರಿಕ ತನ್ನ ಸಂಸತ್ ಸದಸ್ಯರಿಗೆ ಮಾಹಿತಿ ನೀಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಪಾಕಿಸ್ತಾನವು ಅಮೆರಿಕ ಸೇನೆಗೆ ತನ್ನ ವಾಯುಪ್ರದೇಶವನ್ನು ಬಳಸಲು ಅನುಮತಿ ನೀಡಿದೆ ಎಂಬ ವರದಿಗಳ ಬಗ್ಗೆ ವಿವರಣೆ ನೀಡುವಂತೆ ಪಾಕಿಸ್ತಾನ ವಿರೋಧ ಪಕ್ಷಗಳು ಸರ್ಕಾರವನ್ನು ಒತ್ತಾಯಿಸಿವೆ. ಈ ಹಿಂದೆ, ಪ್ರಧಾನಿ ಇಮ್ರಾನ್ ಖಾನ್ ಸಂದರ್ಶನವೊಂದರಲ್ಲಿ ಪಾಕಿಸ್ತಾನವು ಆಫ್ಘಾನಿಸ್ತಾನದ ಒಳಗೆ ಯಾವುದೇ ರೀತಿಯ ಕಾರ್ಯಾಚರಣೆಗಾಗಿ ಬಳಸಲು "ಸಂಪೂರ್ಣವಾಗಿ" ಅನುಮತಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.