ಇಸ್ಲಾಮಾಬಾದ್:ಕಾಶ್ಮೀರ ವಿಚಾರದಲ್ಲಿ ಪಾಕ್ ಪ್ರಧಾನಿಯಿಂದ ಕೆಳ ಹಂತದ ಅಧಿಕಾರಿಗಳೂ ಸಾಕಷ್ಟು ತಲೆಕೆಡಿಸಿಕೊಂಡಿದ್ದರೆ, ಅತ್ತ ದೇಶದ ಜನತೆ ಭಾರತದ ಮತ್ತೊಂದು ವಿಚಾರದ ಕುರಿತಂತೆ ಗೂಗಲ್ನಲ್ಲಿ ಹುಡುಕಾಟ ನಡೆಸಿದ್ದಾರೆ.
ಚಂದ್ರಯಾನ 2 ಎನ್ನುವ ಯೋಜನೆ ಭಾರತದ್ದಾದರೂ ಅದರ ಕುತೂಹಲ ಗಡಿಯನ್ನು ದಾಟಿ ವಿಶ್ವಮಟ್ಟದಲ್ಲಿ ಪಸರಿಸಿತ್ತು. ಈ ವಿಚಾರದಲ್ಲಿ ಪಾಕಿಸ್ತಾನವೂ ಹೊರತಾಗಿಲ್ಲ ಎನ್ನುತ್ತೆ ಗೂಗಲ್ ಬಿಚ್ಚಿಟ್ಟ ಈ ದತ್ತಾಂಶ.
ಭಾರತೀಯರ ಕನಸು, ಭರವಸೆಯನ್ನು ಹೊತ್ತೊಯ್ಯುವ ಕಾರ್ಯ ಮುಂದುವರೆಯಲಿದೆ: ಇಸ್ರೋ
ಸೆಪ್ಟೆಂಬರ್ 7ರ ನಸುಕಿನ ಜಾವ 1.30ರಿಂದ 2 ಗಂಟೆ ವೇಳೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಗೆ ಇಳಿಯುವ ಪ್ರಕ್ರಿಯೆ ಜರುಗಿತ್ತು. ಈ ಸಂದರ್ಭದಲ್ಲಿ ಭಾರತದ ಶತ್ರು ರಾಷ್ಟ್ರ ಎಂದೇ ಬಿಂಬಿತವಾಗಿರುವ ಪಾಕಿಸ್ತಾನದ ಮಂದಿ ಸಹ ಎಚ್ಚರವಾಗಿದ್ದು, ಗೂಗಲ್ನಲ್ಲಿ ಚಂದ್ರಯಾನ 2ರ ಸಂಪೂರ್ಣ ಬೆಳವಣಿಗೆಗಳನ್ನು ಗಮನಿಸುತ್ತಿದ್ದರು.
ಸೆಪ್ಟೆಂಬರ್ 7ರ 2.30ರಿಂದ 5.30ರ ಅವಧಿಯಲ್ಲಿ ಪಾಕಿಸ್ತಾನದ ಜನತೆ ಗೂಗಲ್ನಲ್ಲಿ ಇಸ್ರೋ ಚಂದ್ರಯಾನ 2ರ ಬಗ್ಗೆ ಸಾಕಷ್ಟು ಹುಡುಕಾಟ ನಡೆಸಿದ್ದಾರೆ.
ಭಾರತದಲ್ಲಿ ಇಳಿಕೆ, ಪಾಕ್ನಲ್ಲಿ ಭಾರಿ ಏರಿಕೆ:
ಚಂದ್ರಯಾನ 2ರ ಬಗ್ಗೆ ಭಾರತೀಯರು ಸಾಕಷ್ಟು ಕುತೂಹಲಿಗರಾಗಿದ್ದರು. ಆದರೆ ಲ್ಯಾಂಡರ್ ಸಂಪರ್ಕ ಕಡಿತಗೊಂಡ ಕೆಲವೇ ಕ್ಷಣಗಳಲ್ಲಿ ಗೂಗಲ್ನಲ್ಲಿ ಭಾರತೀಯರು ಚಂದ್ರಯಾನದ ಬಗ್ಗೆ ಹುಡುಕಾಟವನ್ನು ನಿಲ್ಲಿಸಿದ್ದರು. ಸೆಪ್ಟೆಂಬರ್ 7ರ ಮಧ್ಯಾಹ್ನ 12 ಗಂಟೆ ವೇಳೆಗೆ ಭಾರತದಲ್ಲಿ ಹುಡುಕಾಟ ಸಂಪೂರ್ಣ ಇಳಿಕೆಯಾಗಿತ್ತು. ಮಾಧ್ಯಮದಲ್ಲಿ ಬಹುತೇಕ ವಿಚಾರ ಪ್ರಸಾರವಾದ ಹಿನ್ನೆಲೆಯಲ್ಲಿ ಭಾರತೀಯರು ಚಂದ್ರಯಾನದ ಬಗ್ಗೆ ಗೂಗಲ್ ಮಾಡಲು ಆಸಕ್ತಿ ತೋರಿಲ್ಲ.
ಚಂದ್ರಯಾನ 2ರ ಬಗ್ಗೆ ಭಾರತೀಯರ ಹುಡುಕಾಟ ಆದರೆ ಪಾಕಿಸ್ತಾನದಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು, ಅರ್ಥಾತ್ ಭಾರತಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಆ ದಿನ ಪಾಕಿಗಳು ಚಂದ್ರಯಾನದ ಬಗ್ಗೆ ಗೂಗಲ್ ಕದ ತಟ್ಟಿದ್ದರು. ವಿಶೇಷವೆಂದರೆ ಸೆಪ್ಟೆಂಬರ್ 8ರ ಸಂಜೆ 6.30ರವರೆಗೆ ಚಂದ್ರಯಾನ ಹಾಗೂ ಇಸ್ರೋ ಕುರಿತಂತೆ ಪಾಕಿಸ್ತಾನಿಗಳು ಭಾರಿ ಹುಡುಕಾಟ ನಡೆಸಿದ್ದರು.
ಚಂದ್ರಯಾನ 2ರ ಬಗ್ಗೆ ಪಾಕಿಸ್ತಾನಿಗರ ಹುಡುಕಾಟ