ಇಸ್ಲಾಮಾಬಾದ್(ಪಾಕಿಸ್ತಾನ): ಅತ್ಯಾಚಾರ ಅಪರಾಧಿಗಳ ಕಾಮಾಸಕ್ತಿ ಕುಗ್ಗಿಸಲು ರಾಸಾಯನಿಕ ಬಳಕೆ (chemical castration) ಮಾಡುವ ಮಸೂದೆಗೆ ಪಾಕ್ (Pakistan Parliament) ಸಂಸತ್ನಲ್ಲಿ ಅಂಗೀಕಾರ ಸಿಕ್ಕಿದೆ.
ಪಾಕಿಸ್ತಾನದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಕಳೆದ ವರ್ಷ ಈ ಮಸೂದೆಗೆ ತಾತ್ವಿಕ ಒಪ್ಪಿಗೆ ನೀಡಿದ್ದರು. ಇದೀಗ ಪಾರ್ಲಿಮೆಂಟ್ನಲ್ಲಿ ಮಸೂದೆ ಅಂಗೀಕಾರವಾಗಿದೆ.
ಪಾಕಿಸ್ತಾನದಲ್ಲಿ ಮಹಿಳೆಯರು, ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ (Rape cases in Pakistan) ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಅಪರಾಧಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಇದರ ಜೊತೆಗೆ, ಆರೋಪಿಗಳ ವೃಷಣವನ್ನೇ ಕತ್ತರಿಸಬೇಕೆಂದು ಆಗ್ರಹಿಸಲಾಗಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಅತ್ಯಾಚಾರ ತಡೆಗೆ ಸುಗ್ರೀವಾಜ್ಞೆ ಹೊರಡಿಸಲು ಒಪ್ಪಿಗೆ ಸೂಚಿಸಿತ್ತು.
ಈ ಮಸೂದೆಯಲ್ಲಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದು, ಕಾಮಾಸಕ್ತಿ ಕುಗ್ಗಿಸಲು ರಾಸಾಯನಿಕ ಬಳಕೆ ಮಾಡುವುದು ಸೇರಿಕೊಂಡಿದ್ದು, ಮಸೂದೆ ಇದೀಗ ಅಂಗೀಕಾರಗೊಂಡಿದೆ.