ಇಸ್ಲಾಮಾಬಾದ್:ಸಿಖ್ ಗುರು ಮಹಾರಾಜ ರಣಜೀತ್ ಸಿಂಗ್ ಅವರ ಪುಣ್ಯ ಸ್ಮರಣೆಯ ದಿನವಾದ ಸೋಮವಾರ ಕರ್ತಾರ್ಪುರ್ ಕಾರಿಡಾರ್ ಮತ್ತೆ ತೆರೆಯಲು ಸಿದ್ಧವಾಗಿರುವುದಾಗಿ ಪಾಕಿಸ್ತಾನ ಭಾರತಕ್ಕೆ ತಿಳಿಸಿದೆ ಎಂದು ವಿದೇಶಾಂಗ ಕಚೇರಿ ತಿಳಿಸಿದೆ.
ಈ ಘೋಷಣೆಯನ್ನು ಪಾಕಿಸ್ತಾನ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಟ್ವೀಟ್ ಮಾಡಿ ತಿಳಿಸಿದ್ದಾರೆ. ಕೋವಿಡ್-19 ಸೃಷ್ಟಿಸಿದ್ದ ಸನ್ನಿವೇಶದಿಂದಾಗ ಕಳೆದ 3 ತಿಂಗಳಿನಿಂದ ಕಾರಿಡಾರ್ಅನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮಾರ್ಚ್ 16ರಂದು ಪಾಕಿಸ್ತಾನದ ಕರ್ತಾರ್ಪುರ್ ಸಾಹೀಬ್ ಗುರುದ್ವಾರಕ್ಕೆ ಭಾರತದಿಂದ ತೀರ್ಥಯಾತ್ರೆ ಕೈಗೊಳ್ಳುವವರು ಹಾಗೂ ಇದಕ್ಕೆ ಹೊಸದಾಗಿ ನೋಂದಣಿ ಮಾಡುವುದನ್ನು ಭಾರತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.
ಜಗತ್ತಿನಾದ್ಯಂತ ಇರುವ ಹೆಚ್ಚಿನ ಎಲ್ಲಾ ಧಾರ್ಮಿಕ ಸ್ಥಳಗಳನ್ನು ಮತ್ತೆ ತೆರೆಯುತ್ತಿರುವುದರಿಂದ ಸಿಖ್ ಯಾತ್ರಾರ್ಥಿಗಳಿಗೆ ಕರ್ತಾರ್‌ಪುರ್ ಸಾಹೀಬ್ ಕಾರಿಡಾರ್ ಮತ್ತೆ ತೆರೆಯಲು ಅಗತ್ಯ ಸಿದ್ಧತೆಗಳಗಳನ್ನು ಮಾಡಲಾಗಿದೆ ಎಂದು ಪಾಕ್ ತಿಳಿಸಿದೆ. ಆರೋಗ್ಯ ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು, ಕಾರಿಡಾರ್ಅನ್ನು ಮತ್ತೆ ತೆರೆಯಲು ಅಗತ್ಯವಾದ ಎಸ್‌ಒಪಿ(ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್)ಗಳನ್ನು ರೂಪಿಸಲು ಪಾಕಿಸ್ತಾನವು ಭಾರತವನ್ನು ಆಹ್ವಾನಿಸಿದೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಉಭಯ ದೇಶಗಳು ಭಾರತದ ಗುರುದಾಸ್‌ಪುರದ ದೇರಾ ಬಾಬಾ ಸಾಹೀಬ್ ಮತ್ತು ಪಾಕಿಸ್ತಾನದ ಗುರುದ್ವಾರ ಕರ್ತಾರ್‌ಪುರ್ ಸಾಹೀಬ್ ಸಂಪರ್ಕಿಸುವ ಕಾರಿಡಾರ್ಅನ್ನು ತೆರಯುವ ಐತಿಹಾಸಿಕ ನಿರ್ಧಾರಕ್ಕೆ ಬಂದಿದ್ದವು. ಎಲ್ಲಾ ಭಾರತೀಯ ಯಾತ್ರಿಕರಿಗೆ ಐತಿಹಾಸಿಕ ಗುರುದ್ವಾರಕ್ಕೆ ವರ್ಷಪೂರ್ತಿ ವೀಸಾ ರಹಿತ ಪ್ರಯಾಣ ಕೈಗೊಳ್ಳಲು ಅವಕಾಶವಿದೆ.