ಬೀಜಿಂಗ್(ಚೀನಾ):ವಾಯವ್ಯ ಪಾಕಿಸ್ತಾನದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚೀನಾ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಪ್ರಧಾನ ಸಂಪಾದಕ ಹು ಕ್ಸಿಜಿನ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಭಯೋತ್ಪಾದಕರನ್ನು ತೊಡೆದುಹಾಕಲು ಪಾಕಿಸ್ತಾನಕ್ಕೆ ಸಾಧ್ಯವಾಗದಿದ್ದರೆ, ಚೀನಾದ ಕ್ಷಿಪಣಿಗಳು ಮತ್ತು ಸೇನೆಯನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕಾಗಬಹುದು ಎಂದು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
ಈ ದಾಳಿಯ ಹಿಂದಿನ ಭಯೋತ್ಪಾದಕರು ಖಂಡಿತವಾಗಿಯೂ ಪತ್ತೆಯಾಗುತ್ತಾರೆ ಮತ್ತು ಅವರನ್ನು ನಿರ್ನಾಮ ಮಾಡಬೇಕು. ಪಾಕಿಸ್ತಾನಕ್ಕೆ ಸಾಮರ್ಥ್ಯವಿಲ್ಲದಿದ್ದರೆ, ಪಾಕ್ನ ಒಪ್ಪಿಗೆಯೊಂದಿಗೆ ಚೀನಾದ ಕ್ಷಿಪಣಿಗಳು ಮತ್ತು ವಿಶೇಷ ಪಡೆಗಳನ್ನು ಭಯೋತ್ಪಾದನೆ ನಿಗ್ರಹಕ್ಕೆ ಕಾರ್ಯರೂಪಕ್ಕೆ ತರಬಹುದು ಎಂದಿದ್ದಾರೆ.
ಜುಲೈ 14ರಂದು ಬಸ್ನಲ್ಲಿ ಭೀಕರ ಸ್ಫೋಟವೊಂದು ಸಂಭವಿಸಿ, ಚೀನಾದ 9 ಪ್ರಜೆಗಳೂ ಸೇರಿದಂತೆ ಒಟ್ಟು 13 ಮಂದಿ ಸಾವನ್ನಪ್ಪಿದ್ದ ಘಟನೆ ಈಶಾನ್ಯ ಪಾಕಿಸ್ತಾನದಲ್ಲಿ ನಡೆದಿತ್ತು. ದಸು ಜಲವಿದ್ಯುತ್ ಯೋಜನೆಯ ಡ್ಯಾಮ್ಗಾಗಿ ಕಾರ್ಯನಿರ್ವಹಿಸುತ್ತಿದ್ದ ತೆರಳುತ್ತಿದ್ದ ಚೀನಾದ ಇಂಜಿನಿಯರ್ಗಳು, ಸರ್ವೇಯರ್ಗಳು ಸ್ಫೋಟದಲ್ಲಿ ಸಾವನ್ನಪ್ಪಿದ್ದರು.