ಲಾಹೋರ್ (ಪಾಕಿಸ್ತಾನ):2008ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಮತ್ತು ನಿಷೇಧಿತ ಜಮಾತ್ - ಉದ್ - ದವಾ ಮುಖ್ಯಸ್ಥ ಹಫೀಜ್ ಸಯೀದ್ ಮನೆ ಹೊರಗೆ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಅಧಿಕಾರಿಗಳು ಪಂಜಾಬ್ ಪ್ರಾಂತ್ಯದ ವಿವಿಧ ನಗರಗಳಲ್ಲಿ ದಾಳಿ ನಡೆಸಿ ಹಲವಾರು ಶಂಕಿತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಜೋಹರ್ ಟೌನ್‌ನ ಬಿಒಆರ್ ಸೊಸೈಟಿಯಲ್ಲಿರುವ ಸಯೀದ್ ಅವರ ನಿವಾಸದ ಹೊರಗೆ ನಡೆದ ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದು, 21 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅವರ ಮನೆ ಕಾವಲು ಕಾಯುತ್ತಿದ್ದ ಪೊಲೀಸ್ ಅಧಿಕಾರಿಗಳಿಗೂ ಗಂಭೀರ ಗಾಯಗಳಾಗಿವೆ. ಸ್ಫೋಟದ ತೀವ್ರತೆಯಿಂದ ಸಯೀದ್ ಮನೆ ಕಿಟಕಿ, ಗೋಡೆಗಳು ಚೂರು ಚೂರಾಗಿದ್ದವು. ಈವರೆಗೆ ಘಟನೆಯ ಜವಾಬ್ದಾರಿಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ.
ಸ್ಫೋಟಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಪಂಜಾಬ್‌ನ ವಿವಿಧ ನಗರಗಳಲ್ಲಿ ದಾಳಿ ನಡೆಸಿ, ಹಲವಾರು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿದೆ. ಸಿಟಿಡಿ ಮತ್ತು ಗುಪ್ತಚರ ಸಂಸ್ಥೆಗಳು ಅಪರಾಧದ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿ, ತನಿಖೆ ನಡೆಸುತ್ತಿವೆ.