ಇಸ್ಲಾಮಾಬಾದ್: ಕಾಶ್ಮೀರ ವಿಚಾರದಲ್ಲಿ ಭಾರತದ ನಿರ್ಧಾರವನ್ನು ಖಂಡಿಸಿ ವಿಶ್ವಸಂಸ್ಥೆಗೆ ಹೋಗಿ ಕೈಸುಟ್ಟುಕೊಂಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇಂದು ಇದೇ ಕಾಶ್ಮೀರ ಸಮಸ್ಯೆ ಬಗ್ಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇಂದು ಸಂಜೆ ಭಾರತೀಯ ಕಾಲಮಾನ 5.30ಕ್ಕೆ ದೇಶವನ್ನು ಉದ್ದೇಶಿಸಿ ಕಾಶ್ಮೀರ ಸಮಸ್ಯೆಯ ಬಗ್ಗೆ ಮಾತನಾಡಲಿದ್ದಾರೆ ಎಂದು ಖಾನ್ ವಿಶೇಷ ಸಹಾಯಕ ಡಾ.ಫಿರ್ದೌಸ್ ಆಶಿಕ್ ಖಾನ್ ಟ್ವೀಟ್ ಮಾಡಿದ್ದಾರೆ.
ಕಾಶ್ಮೀರ ವಿಶೇಷ ಸ್ಥಾನಮಾನವನ್ನು ಮೋದಿ ಸರ್ಕಾರ ರದ್ದುಗೊಳಿಸಿದ ಬಳಿಕ ಪಾಕಿಸ್ತಾನ ಇದೇ ವಿಚಾರವನ್ನು ವಿಶ್ವಸಂಸ್ಥೆ ಮುಂದಿಟ್ಟು ಛೀಮಾರಿ ಹಾಕಿಸಿಕೊಂಡಿತ್ತು. ಇದಾದ ಬಳಿಕ ಇಮ್ರಾನ್ ಖಾನ್ ತಮ್ಮ ಪ್ರತಿಪಕ್ಷದ ಟೀಕೆಗೂ ಒಳಗಾಗಿದ್ದರು.
ವಿಶ್ವಸಂಸ್ಥೆಯಲ್ಲಿ ಬಹುತೇಕ ಎಲ್ಲ ದೇಶಗಳು ಭಾರತದ ನಿರ್ಧಾರವನ್ನು ಬೆಂಬಲಿಸಿದ್ದವು. ಈ ಮೂಲಕ ಪಾಕಿಸ್ತಾನಕ್ಕೆ ಬಹುದೊಡ್ಡ ರಾಜತಾಂತ್ರಿಕ ಸೋಲುಂಟಾಗಿತ್ತು. ಈ ಎಲ್ಲ ಬೆಳವಣಿಗೆಗಳು ನಡೆದ ವಾರದ ಬಳಿಕ ಪಾಕ್ ಪ್ರಧಾನಿ ಇದೇ ವಿಚಾರವಾಗಿ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದು, ಸಹಜವಾಗಿಯೇ ಉಭಯ ದೇಶದಲ್ಲಿ ಕುತೂಹಲ ಮೂಡಿಸಿದೆ.