ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತನ್ನ ದೇಶದ ಎಲ್ಲಾ ಅಲ್ಪಸಂಖ್ಯಾತ ಹಿಂದೂ ಸಮುದಾಯದ ನಾಗರಿಕರಿಗೆ ದೀಪಾವಳಿ ಶುಭಾಶಯ ಕೋರಿ, ಉರ್ದು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಟ್ವೀಟ್ ಮಾಡಿದ್ದಾರೆ.
ದೇಶದ ಎಲ್ಲಾ ಹಿಂದೂ ಸಮುದಾಯದವರಿಗೆ ದೀಪಾವಳಿ ಹಬ್ಬದ ಶುಭಾಶಯ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ. ಮಾಹಿತಿ ಖಾತೆ ಸಚಿವರಾದ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್) ಅಧ್ಯಕ್ಷರಾದ ಶಹಬಾಜ್ ಶರೀಫ್ ಕೂಡಾ ದೀಪಾವಳಿಗೆ ಶುಭಾಶಯ ಕೋರಿದ್ದು, ದೀಪಗಳ ಹಬ್ಬ ಜಗತ್ತಿನಲ್ಲೆಡೆ ಶಾಂತಿ, ಪ್ರೀತಿ ಮತ್ತು ಸಂತೋಷದ ಮೂಲವಾಗಲಿ ಎಂದು ಟ್ವೀಟಿಸಿದ್ದಾರೆ.
ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಬಿಲಾವಲ್ ಭುಟ್ಟೋ ಕೂಡಾ ಟ್ವೀಟ್ ಮಾಡಿದ್ದು, ದುಷ್ಟತನ ಎಷ್ಟೇ ಶಕ್ತಿ ಶಾಲಿಯಾದರೂ ಅಚಲ ಸಂಕಲ್ಪ ಮತ್ತು ನಿರಂತರ ಹೋರಾಟದ ಕೈಯಲ್ಲಿ ಸೋಲುತ್ತದೆ ಎಂಬ ಸಂದೇಶವನ್ನು ದೀಪಾವಳಿ ನೀಡುತ್ತದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಇನ್ನು ಪಾಕಿಸ್ತಾನದಲ್ಲಿರುವ ಸುಮಾರು 40 ಲಕ್ಷಕ್ಕೂ ಹೆಚ್ಚು ಹಿಂದೂಗಳು ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದು, ಮನೆ ಮತ್ತು ದೇವಾಲಯಗಳನ್ನು ವರ್ಣರಂಜಿತ ದೀಪಗಳಿಂದ ಅಲಂಕರಿಸಿದ್ದಾರೆ. ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.
ಇದನ್ನೂ ಓದಿ:ವಾಯುಮಾರ್ಗ ಬಳಕೆಗೆ ಅವಕಾಶ ನೀಡುವಂತೆ ಪಾಕ್ಗೆ ಭಾರತ ಮನವಿ