ಇಸ್ಲಾಮಾಬಾದ್ (ಪಾಕಿಸ್ತಾನ):ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಖುರ್ಚಿಗೆ ಕುತ್ತು ಬಂದಿದೆ. ತಮ್ಮದೇ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಸುಮಾರು 24 ಜನ ಸದಸ್ಯರು ತಿರುಗಿ ಬಿದ್ದಿದ್ದು, ಪ್ರತಿಪಕ್ಷಗಳು ಮಂಡಿಸಲು ಉದ್ದೇಶಿಸಿರುವ ಅವಿಶ್ವಾಸ ನಿರ್ಣಯವನ್ನು ಬೆಂಬಲಿಸಲು ಮುಂದಾಗಿದ್ದಾರೆ.
ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಾದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅವಿಶ್ವಾಸ ನಿರ್ಣಯ ಮಂಡಿಸಲು ಉದ್ದೇಶಿಸಿದೆ. ಈ ಸಂಬಂಧ ಈಗಾಗಲೇ ಪ್ರತಿಪಕ್ಷಗಳ ಅಂದಾಜು 100 ಸದಸ್ಯರು ಮಾ.8ರಂದು ಮನವಿಯನ್ನೂ ಸಲ್ಲಿಸಿದ್ದಾರೆ. ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು ಹಾಗೂ ಹಣದುಬ್ಬರಕ್ಕೆ ಇಮ್ರಾನ್ ಖಾನ್ ಕಾರಣ ಎಂದು ಪ್ರತಿಪಕ್ಷಗಳು ದೂರಿವೆ.