ಇಸ್ಲಾಮಾಬಾದ್:ಭಾರತದ ರಫೇಲ್ ಯುದ್ಧ ವಿಮಾನಗಳ ಖರೀದಿಯಿಂದ ಆತಂಕಗೊಂಡ ಪಾಕಿಸ್ತಾನವು ಚೀನಾದ 25 ಮಲ್ಟಿರೋಲ್ ಜೆ-10 ಸಿ ಯುದ್ಧ ವಿಮಾನಗಳ ಖರೀದಿಸುತ್ತಿದೆ.
ಮುಂದಿನ ವರ್ಷ ಮಾರ್ಚ್ 23ರಂದು ನಡೆಯಲಿರುವ ಪಾಕಿಸ್ತಾನ ದಿನ ಸಮಾರಂಭದಲ್ಲಿ J-10C ಯುದ್ಧ ವಿಮಾನ ಭಾಗವಹಿಸಲಿದೆ ಎಂದು ಆಂತರಿಕ ವ್ಯವಹಾರಗಳ ಸಚಿವ ರಶೀದ್ ಅಹ್ಮದ್ ರಾವಲ್ಪಿಂಡಿಯಲ್ಲಿ ತಿಳಿಸಿದರು.
ಇದೇ ವೇಳೆ, ಸಚಿವ ರಶೀದ್ ಅಹ್ಮದ್ ಜೆ-10ಸಿ ಬದಲಿಗೆ ಜೆಎಸ್-10 ಎಂದು ವಿಮಾನದ ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದಾರೆ. ಅತಿ ಗಣ್ಯರು ಪಾಕಿಸ್ತಾನಕ್ಕೆ ಮೊದಲ ಬಾರಿ ಮಾರ್ಚ್ 23ರ ಸಮಾರಂಭದಲ್ಲಿ ಪಾಲ್ಗೊಳ್ಳಲು ಬರುತ್ತಿದ್ದಾರೆ. ಆ ದಿನ JS-10 (J-10C) ನ ಫ್ಲೈ-ಪಾಸ್ಟ್ ಸಮಾರಂಭ ನಡೆಸಲಾಗುತ್ತಿದೆ. ಪಾಕಿಸ್ತಾನದ ವಾಯುಪಡೆಯು ಚೀನಾದ ಫ್ಲೈ-ಪಾಸ್ಟ್ ಅನ್ನು ನಿರ್ವಹಿಸಲಿದೆ. JS-10 (J-10C) ವಿಮಾನವು ರಫೇಲ್‌ಗೆ ಪ್ರತಿ ಸ್ಪರ್ಧಿಯಾಗಿದೆ ಎಂದು ಅವರು ಹೇಳಿದರು.
ಸುಮಾರು ಐದು ವರ್ಷಗಳ ಹಿಂದೆ, ಭಾರತೀಯ ವಾಯುಪಡೆಯ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು 59,000 ಕೋಟಿ ರೂಪಾಯಿಗಳ ಬೃಹತ್ ಒಪ್ಪಂದದ ಅಡಿಯಲ್ಲಿ 36 ರಫೇಲ್ ಜೆಟ್‌ಗಳನ್ನು ಖರೀದಿಸಲು ಭಾರತ ಫ್ರಾನ್ಸ್‌ನೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿತ್ತು.
ಇದೀಗ ಚೀನಾ ತನ್ನ ಅತ್ಯಂತ ವಿಶ್ವಾಸಾರ್ಹ ಫೈಟರ್ ಜೆಟ್‌ಗಳಲ್ಲಿ ಒಂದಾದ J-10C ಅನ್ನು ಒದಗಿಸುವ ಮೂಲಕ ತನ್ನ ಹತ್ತಿರದ ಮಿತ್ರನ ರಕ್ಷಣೆಗೆ ಬಂದಿದೆ.