ಯಾಂಗೂನ್(ಮ್ಯಾನ್ಮಾರ್):ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30ಕ್ಕೂ ಹೆಚ್ಚು ಜನರನ್ನು ಕೊಂದು ಅವರ ದೇಹಗಳನ್ನು ಸುಡಲಾಗಿದೆ ಎಂದು ಮಾನವ ಹಕ್ಕುಗಳ ಗುಂಪಿನ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ತಿಳಿಸಿವೆ.
ಕರೆನ್ನಿ ಹ್ಯೂಮನ್ ರೈಟ್ಸ್ ಗ್ರೂಪ್ ಅನ್ನು ಉಲ್ಲೇಖಿಸಿರುವ ಅಲ್ ಜಜೀರಾ ಮಾಧ್ಯಮ ಸಂಸ್ಥೆ ಕಯಾಹ್ ರಾಜ್ಯದ ಪ್ರೂಸೊ ಪಟ್ಟಣದ 'ಮೊ ಸೊ' ಗ್ರಾಮದಲ್ಲಿ ಬಳಿ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿ ಮಾಡಿದೆ.
ಈ ಕುರಿತು ಫೇಸ್ಬುಕ್ ಪೋಸ್ಟ್ ಮಾಡಿರುವ ಕರೆನ್ನಿ ಹ್ಯೂಮನ್ ರೈಟ್ಸ್ ಗ್ರೂಪ್, ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಅಮಾನವೀಯ ಮತ್ತು ಕ್ರೂರ ಹತ್ಯೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಈ ವರ್ಷದ ಫೆಬ್ರವರಿಯಲ್ಲಿ ಸೇನಾ ದಂಗೆ ನಡೆದಿದ್ದು, ಅಲ್ಲಿನ ಸರ್ಕಾರವನ್ನು ಪದಚ್ಯುತಗೊಳಿಸಿದ್ದ ಸೇನೆ ಅಧಿಕಾರ ಚಲಾವಣೆ ಮಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಸೇನಾ ಆಡಳಿತದ ವಿರುದ್ಧ ಅಲ್ಲೊಂದು ಗೆರಿಲ್ಲಾ ಪಡೆ ಹುಟ್ಟಿಕೊಂಡಿದ್ದು, ಮೊ ಸೊ ಗ್ರಾಮದ ಬಳಿ ಸೇನೆ ಮತ್ತು ಗೆರಿಲ್ಲಾಗಳ ನಡುವೆ ಭೀಕರ ಘರ್ಷಣೆ ನಡೆದಿದೆ.
ಇದಾದ ನಂತರ ಸೇನಾ ದಂಗೆಯಿಂದ ಪಲಾಯನ ಮಾಡಿ ಬೇರೆಡೆ ವಾಸ ಮಾಡುತ್ತಿದ್ದ ನಿರಾಶ್ರಿತರಿದ್ದ 'ಮೊ ಸೊ' ಗ್ರಾಮಕ್ಕೆ ನುಗ್ಗಿ ಸೇನೆ ದಾಳಿ ನಡೆಸಿದೆ ಎನ್ನಲಾಗ್ತಿದೆ. ಸುಮಾರು 30 ಮಂದಿಯನ್ನು ಕೊಂದು, ಶವಗಳನ್ನು ಮೂರು ವಾಹನಗಳಿಗೆ ಕಟ್ಟಿ, ಎಳೆದೊಯ್ದು ಬೆಂಕಿ ಹಚ್ಚಿ ಸುಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಘಟನೆ ನಡೆದ ನಂತರ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯಾದ ಸೇವ್ ದ ಚಿಲ್ಡ್ರನ್ನ (Save Che Children) ಅಧಿಕಾರಿಗಳಿಬ್ಬರು ನಾಪತ್ತೆಯಾಗಿದ್ದಾರೆ ಎಂದು ಉನ್ನತ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ:ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರುದ್ಧ ಹೋರಾಡಿದ್ದ ಆರ್ಚ್‌ಬಿಷಪ್ ಡೆಸ್ಮಂಡ್ ಟುಟು ಇನ್ನಿಲ್ಲ..