ಹೈದರಾಬಾದ್: 2018ರಲ್ಲಿ 1 ವರ್ಷಕ್ಕೂ ಕಡಿಮೆ ವಯಸ್ಸಿನ 13 ಮಿಲಿಯನ್ಗೂ ಅಧಿಕ ಮಕ್ಕಳು ಜೀವರಕ್ಷಕ ಲಸಿಕೆಗಳಿಂದ ವಂಚಿತರಾಗಿದ್ದಾರೆ ಎಂದು ಯುನಿಸೆಫ್ ವರದಿ ತಿಳಿಸಿದೆ. ಕಳಪೆ ಆರೋಗ್ಯ ವ್ಯವಸ್ಥೆ ಹೊಂದಿರುವ ದೇಶಗಳಲ್ಲಿ ಲಸಿಕೆ ವಂಚಿತ ಮಕ್ಕಳ ಸಂಖ್ಯೆ ಅಧಿಕವಾಗಿದೆ. ಪ್ರಸ್ತುತ ಕೊರೊನಾ ವೈರಸ್ ಸಂಕಷ್ಟದಿಂದ ಲಸಿಕಾ ಕಾರ್ಯಕ್ರಮಗಳಿಗೆ ಅಡ್ಡಿ ಉಂಟಾಗುತ್ತಿರುವುದರಿಂದ 2020 ಹಾಗೂ ಅದರ ನಂತರದ ವರ್ಷಗಳಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಮಿತಿಮೀರುವ ಸಾಧ್ಯತೆಗಳಿವೆ ಎಂದು ಯುನಿಸೆಫ್ ಎಚ್ಚರಿಸಿದೆ.
"ವಿಶ್ವಾದ್ಯಂತ ಒಂದು ವರ್ಷ ಕೆಳಗಿನ 20 ಮಿಲಿಯನ್ಗೂ ಅಧಿಕ ಮಕ್ಕಳಿಗೆ ದಡಾರ ಹಾಗೂ ಪೋಲಿಯೊ ಲಸಿಕೆ ಹಾಕಲಾಗಿಲ್ಲ. ಎಲ್ಲೆಡೆ ಕೊರೊನಾ ವೈರಸ್ ವ್ಯಾಪಿಸುತ್ತಿರುವ ಈ ಸಮಯದಲ್ಲಿ ಜೀವರಕ್ಷಕ ಲಸಿಕೆಗಳನ್ನು ನೀಡುವುದು ಈ ಹಿಂದೆಂದಿಗಿಂತಲೂ ಅತ್ಯವಶ್ಯವಾಗಿದೆ. ಲಸಿಕಾ ಕಾರ್ಯಗಳಿಗೆ ಅಡ್ಡಿಯುಂಟಾದಲ್ಲಿ ಲಕ್ಷಾಂತರ ಚಿಕ್ಕ ಮಕ್ಕಳ ಜೀವ ಅಪಾಯಕ್ಕೆ ಸಿಲುಕಬಹುದು" ಎನ್ನುತ್ತಾರೆ ಯುನಿಸೆಫ್ನ ಪ್ರಮುಖ ಸಲಹಾಗಾರ ಹಾಗೂ ಲಸಿಕಾ ಕಾರ್ಯಕ್ರಮದ ಮುಖ್ಯಸ್ಥ ರಾಬಿನ್ ನ್ಯಾಂಡಿ.
ಬಡರಾಷ್ಟ್ರಗಳು ಮಾತ್ರವಲ್ಲದೆ ಅಧಿಕ ಆದಾಯದ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್ ಹಾಗೂ ಫ್ರಾನ್ಸ್ಗಳಲ್ಲೂ ಲಸಿಕಾಕರಣ ಸಂಪೂರ್ಣವಾಗುತ್ತಿಲ್ಲವಾದ್ದರಿಂದ ದಡಾರ ಕಾಯಿಲೆ ಮರುಕಳಿಸಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
2010 ರಿಂದ 1018 ರ ಅವಧಿಯಲ್ಲಿ ಇಥಿಯೋಪಿಯಾದ ಒಂದು ವರ್ಷ ಕೆಳಗಿನ 10.9 ಮಿಲಿಯನ್ಗೂ ಅಧಿಕ ಮಕ್ಕಳಿಗೆ ದಡಾರ್ ಲಸಿಕೆಯ ಮೊದಲ ಡೋಸ್ ಹಾಕಲಾಗಿಲ್ಲ. ಹಾಗೆಯೇ ಕಾಂಗೊ ದೇಶದ 6.1 ಮಿಲಿಯನ್, ಅಫ್ಘಾನಿಸ್ತಾನದ 3.8 ಮಿಲಿಯನ್, ಛಾಡ್, ಮಡಗಾಸ್ಕರ್ ಮತ್ತು ಉಗಾಂಡಾದ ತಲಾ 2.7 ಮಿಲಿಯನ್ ಮಕ್ಕಳು ದಡಾರ್ ಲಸಿಕೆಯಿಂದ ವಂಚಿತರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಎತ್ತಿ ತೋರಿಸಿದೆ. ಅದರಂತೆ 2018 ರಲ್ಲಿ ಸಂಪೂರ್ಣ ದಕ್ಷಿಣ ಏಷ್ಯಾದಲ್ಲಿ 3.2 ಮಿಲಿಯನ್ ಮಕ್ಕಳಿಗೆ ಯಾವುದೇ ಜೀವರಕ್ಷಕ ಲಸಿಕೆ ಹಾಕಲಾಗಿಲ್ಲ.
ನಿರಂತರವಾದ ಲಸಿಕಾ ಕಾರ್ಯಕ್ರಮಗಳಿಂದ ಈ ಹಿಂದೆ ಮರುಕಳಿಸುತ್ತಿದ್ದ ಸಾಂಕ್ರಾಮಿಕ ಕಾಯಿಲೆಗಳನ್ನು ತಡೆಗಟ್ಟಲಾಗಿದೆ ಎಂದು ಸಾಬೀತಾಗಿದೆ. ಆದರೂ ಕೆಲ ದೇಶಗಳಲ್ಲಿ ಲಸಿಕಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯದಿರುವುದರಿಂದ ಲಕ್ಷಾಂತರ ಮಕ್ಕಳು ಗಂಭೀರ ಕಾಯಿಲೆಗೆ ತುತ್ತಾಗುವ ಸಾಧ್ಯತೆಗಳಿವೆ.