ಕೋವಿಡ್ 19 ರೂಪಾಂತರಿ ತಳಿ ಒಮಿಕ್ರಾನ್ ಜಗತ್ತಿನ 38 ದೇಶಗಳಲ್ಲಿ ಕಾಣಿಸಿಕೊಂಡಿದೆ. ಆದರೆ, ಇದುವರೆಗೆ ಯಾವುದೇ ಸಾವು ವರದಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಹೆಚ್‌ಒ) ಸ್ಪಷ್ಟಪಡಿಸಿದೆ.
ಹೊಸದಾಗಿ ಕಾಣಿಸಿಕೊಂಡಿರುವ ರೂಪಾಂತರಿ ಜಾಗತಿಕ ಆರ್ಥಿಕತೆಯ ಚೇತರಿಕೆಗೆ ಹೊಡೆತ ನೀಡಲಿದೆ ಎಂಬ ಎಚ್ಚರಿಕೆಯ ನಡುವೆ, ಎಲ್ಲೆಡೆ ದೇಶಗಳು ಮಾರಕ ರೋಗದ ಹೊಸ ತಳಿಯನ್ನು ನಿಯಂತ್ರಿಸಲು ಕ್ರಮಗಳಿಗೆ ಮುಂದಾಗುತ್ತಿರುವ ಬೆನ್ನಲ್ಲೇ ಡಬ್ಲ್ಯೂಹೆಚ್‌ಒ ಈ ಹೇಳಿಕೆ ನೀಡಿತು.
ಒಮಿಕ್ರಾನ್ ಅಧ್ಯಯನಕ್ಕೆ ಸಮಯ ಬೇಕು: WHO
ಈ ರೂಪಾಂತರಿ ಹರಡುವ ಬಗೆಯನ್ನು ಕಂಡುಹಿಡಿಯಲು ಕೆಲವು ವಾರಗಳೇ ಬೇಕು ಎಂದು ಡಬ್ಲ್ಯೂ ಹೆಚ್‌ಒ ಈಗಾಗಲೇ ಎಚ್ಚರಿಕೆಯ ಸಂದೇಶ ರವಾನಿಸಿದೆ. ಈ ತಳಿ ರೋಗಿಗಳಿಗೆ ಉಂಟುಮಾಡುವ ಬೇನೆಯ ತೀವ್ರತೆ, ಪರಿಣಾಮಕಾರಿ ಚಿಕಿತ್ಸೆ, ಇದರ ವಿರುದ್ಧ ಲಸಿಕೆ ಪ್ರಯೋಗದ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.
ಒಮಿಕ್ರಾನ್ ಬಗ್ಗೆ ಶುಕ್ರವಾರ ಮಾಹಿತಿ ನೀಡಿರುವ ಡಬ್ಲ್ಯೂಹೆಚ್‌ಒ, ಹೊಸ ತಳಿಯಿಂದ ಜಗತ್ತಿನಲ್ಲಿ ಈವರೆಗೆ ಸಂಭವಿಸಿದ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ. ಆದರೆ ಈ ರೂಪಾಂತರಿಯ ಹರಡುವಿಕೆಯ ಪ್ರಮಾಣವು ಮುಂದಿನ ಕೆಲವೇ ತಿಂಗಳಲ್ಲಿ ಯೂರೋಪಿನ ಅರ್ಧಕ್ಕಿಂತಲೂ ಹೆಚ್ಚಿನ ಪ್ರಮಾಣದ ಕೋವಿಡ್ 19 ಪ್ರಕರಣಗಳಷ್ಟು ಹರಡುವ ಎಚ್ಚರಿಕೆ ಸೃಷ್ಟಿಸಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಜಾಗತಿಕ ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೆ ತೊಡಕು: IMF
ಹೊಸ ಕೋವಿಡ್ ರೂಪಾಂತರಿಯು ಡೆಲ್ಟಾದಂತೆ, ಜಾಗತಿಕ ಆರ್ಥಿಕ ಪುನಶ್ಚೇತನಕ್ಕೆ ತೊಡಕಾಗುವ ಸಂಭವವಿದೆ ಎಂದು ವಿಶ್ವ ಹಣಕಾಸು ಸಂಸ್ಥೆ(ಐಎಂಎಫ್) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ ಈಗಾಗಲೇ ಭವಿಷ್ಯ ನುಡಿದಿದ್ದಾರೆ.
ಹೊಸ ತಳಿಯ ಆಗಮನಕ್ಕೂ ಮುನ್ನ, ಜಾಗತಿಕ ಅರ್ಥವ್ಯವಸ್ಥೆಯು ಸ್ವಸ್ಥಿತಿಗೆ ಬರುವ ಬಗ್ಗೆ ನಮಗೆ ಆತಂಕವಿತ್ತು. ಆದರೆ, ಈ ಬೆಳವಣಿಗೆ ಹೀಗೆಯೇ ಮುಂದುವರೆದರೆ ಚೇತರಿಕೆ ವೇಗವನ್ನು ನಾವು ಕಳೆದುಕೊಳ್ಳಲಿದ್ದೇವೆ. ಈ ತಳಿಯು ಅತ್ಯಂತ ವೇಗವಾಗಿ ಹರಡುವ ಸಾಧ್ಯತೆಯಿದ್ದು, ಆತ್ಮವಿಶ್ವಾಸವನ್ನು ಕುಗ್ಗಿಸಲಿದೆ ಎಂದು ಕ್ರಿಸ್ಟಿಲಿನಾ ಜಾರ್ಜೀವಾ ಕಳವಳ ವ್ಯಕ್ತಪಡಿಸಿದ್ದಾರೆ.
ಒಮಿಕ್ರಾನ್ ಬಗ್ಗೆ ದಕ್ಷಿಣ ಆಫ್ರಿಕಾ ವೈದ್ಯರು ಹೇಳುವುದೇನು?
ಕಳೆದ ನವೆಂಬರ್ 24ರಂದು ಒಮಿಕ್ರಾನ್ ಮೊಟ್ಟ ಮೊದಲು ಬೆಳಕಿಗೆ ಬಂದಿರುವ ದಕ್ಷಿಣ ಆಫ್ರಿಕಾ ದೇಶದ ಸಂಶೋಧಕರ ಪ್ರಾಥಮಿಕ ಅಧ್ಯಯನ ವರದಿಯ ಪ್ರಕಾರ, ಡೆಲ್ಟಾ ಅಥವಾ ಬೀಟಾ ತಳಿಗೆ ಹೋಲಿಸಿದರೆ ಈ ತಳಿಯು ಮೂರು ಪಟ್ಟು ಅಧಿಕ ಮರುಸೋಂಕು ಉತ್ಪತ್ತಿ ಮಾಡುತ್ತದೆ.
ಒಮಿಕ್ರಾನ್ ಕಾಣಿಸಿಕೊಂಡ ಬಳಿಕ ಐದು ವರ್ಷದೊಳಗಿನ ಮಕ್ಕಳು ಆಸ್ಪತ್ರೆ ದಾಖಲಾಗುವ ಪ್ರಮಾಣ ಹೆಚ್ಚಿದೆ. ಆದರೆ, ಮಕ್ಕಳು ಈ ತಳಿಯಿಂದ ಹೆಚ್ಚು ಬಾಧಿತರಾಗುತ್ತಿದ್ದಾರೆ ಎಂದು ಹೇಳಲು ಸದ್ಯಕ್ಕೆ ಸಾಧ್ಯವಿಲ್ಲ ಎಂದು ದಕ್ಷಿಣ ಆಫ್ರಿಕಾ ವೈದ್ಯರು ತಿಳಿಸಿದರು. ಯುನೈಟೆಡ್ ಸ್ಟೇಟ್ಸ್ ಮತ್ತು ಆಸ್ಟ್ರೇಲಿಯಾ ರೂಪಾಂತರಿಯ ಹೊಸ ತಳಿ ಸ್ಥಳೀಯವಾಗಿಯೇ ಪತ್ತೆಯಾಗಿರುವ ಹೊಸ ದೇಶಗಳಾಗಿವೆ.
ಇದನ್ನೂ ಓದಿ:ಕೊರೊನಾ ಪ್ರಸರಣ ಕಡಿಮೆ ಮಾಡುವ ಚ್ಯುಯಿಂಗ್ ಗಮ್ ಅಭಿವೃದ್ಧಿಪಡಿಸುತ್ತಿರುವ ವಿಜ್ಞಾನಿಗಳು..!