ವೆಲ್ಲಿಂಗ್ಟನ್: ವಾರದ ಹಿಂದೆ ನ್ಯೂಜಿಲ್ಯಾಂಡ್ನಲ್ಲಿ ನಡೆದ ಭೀಕರ ದಾಳಿಗೆ ಸರ್ಕಾರ ಸದ್ಯ ದಿಟ್ಟ ಕ್ರಮ ಕೈಗೊಳ್ಳಲು ಮುಂದಾಗಿದೆ. ಭವಿಷ್ಯಯದಲ್ಲಿ ಇಂತಹ ದಾಳಿ ಮರುಕಳಿಸಬಾರದು ಎಂದು ಹೊಸ ಯೋಜನೆಯೊಂದು ಜಾರಿಯಾಗಿದೆ.
ಮಿಲಿಟರಿ ಮಾದರಿಯ ಸೆಮಿ ಅಟೊಮ್ಯಾಟಿಕ್ ಹಾಗೂ ಮಾನವ ಚಾಲಿತ ಗನ್ಗಳ ಮಾರಾಟವನ್ನು ತಕ್ಷಣದಿಂದಲೇ ನಿಷೇಧಿಸಿ ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂಡಾ ಆರ್ಡೆನ್ ಆದೇಶಿಸಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಜಸಿಂಡಾ, ನ್ಯೂಜಿಲ್ಯಾಂಡ್ ದೇಶದಲ್ಲಿ ಮಿಲಿಟರಿ ಮಾದರಿ ಸೆಮಿ ಅಟೊಮ್ಯಾಟಿಕ್ ಗನ್ ಹಾಗೂ ರೈಫಲ್ಗಳಗಳನ್ನು ಬ್ಯಾನ್ ಮಾಡಲಾಗಿದೆ. ಈ ಆದೇಶ ತಕ್ಷಣದಿಂದ ಜಾರಿಯಾಗಲಿದೆ ಎಂದಿದ್ದಾರೆ.
ಈ ಆದೇಶದ ಬಳಿಕ ಯಾವುದೇ ವ್ಯಕ್ತಿಯೂ ನ್ಯೂಜಿಲ್ಯಾಂಡ್ನಲ್ಲಿ ನಿಷೇಧಕ್ಕೊಳಗಾದ ಗನ್ಗಳನ್ನು ಮಾರಾಟ ಹಾಗೂ ಖರೀದಿ ಮಾಡುವಂತಿಲ್ಲ. ಖರೀದಿಗೆ ಪೊಲೀಸರ ಅನುಮತಿ ಕಡ್ಡಾಯ ಎಂದಿರುವ ಜಸಿಂಡಾ, ದೇಶದ ಜನತೆ ಇನ್ನು ಮುಂದಿನ ದಿನಗಳಲ್ಲಿ ಇಂತಹ ಗನ್ಗಳನ್ನು ಖರೀದಿಸಲು ಅನುಮತಿ ಕೇಳುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ರೈಸ್ಟ್ಚರ್ಚ್ನಲ್ಲಿ ಏಕಕಾಲಕ್ಕೆ ನಡೆದ ದಾಳಿಯಲ್ಲಿ 50 ಮಂದಿ ನಾಗರಿಕರು ಸಾವನ್ನಪ್ಪಿದ್ದರು. ಈ ದಾಳಿಗೆ ವಿಶ್ವಮಟ್ಟದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.