ಇಸ್ಲಾಮಾಬಾದ್:ಆ್ಯಂಟಿ-ರೇಪ್ (ಅತ್ಯಾಚಾರ ವಿರೋಧಿ) ಸುಗ್ರೀವಾಜ್ಞೆಗೆ ಪಾಕಿಸ್ತಾನ ಅಧ್ಯಕ್ಷ ಆರಿಫ್ ಅಲ್ವಿ ಮಂಗಳವಾರ ಅನುಮೋದನೆ ನೀಡಿದ್ದು, ಮಹಿಳೆಯರು ಮತ್ತು ಪೋಷಕರಲ್ಲಿ ಸಂತಸ ಮೂಡಿಸಿದೆ.
ಹೊಸ ಸುಗ್ರಿವಾಜ್ಞೆಯ ನಿಬಂಧನೆಗಳ ಪ್ರಕಾರ, ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಔಷಧಿ(Castration) ನೀಡುವ ಮೂಲಕ ಅವರ ಪುರುಷತ್ವ ಹರಣ ಮಾಡಬಹುದಾಗಿದೆ. ಕಳೆದ ತಿಂಗಳು ಪಾಕಿಸ್ತಾನದ ಸಚಿವ ಸಂಪುಟ ಸಭೆ ನಡೆಸಿ ಅತ್ಯಾಚಾರ ವಿರೋಧಿ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಿತು.
ಸುಗ್ರಿವಾಜ್ಞೆಯಲ್ಲೇನಿದೆ?
ಈ ಕಾನೂನಿನ್ವಯ ದೇಶಾದ್ಯಂತ ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆಯಾಗಲಿದೆ. ಈ ಕೇಸುಗಳ ವಿಚಾರಣೆಯಲ್ಲಿ ಕೋರ್ಟ್‌ಗಳು ನಾಲ್ಕು ತಿಂಗಳಲ್ಲಿ ಮುಗಿಸಬೇಕು. ಪ್ರಕರಣಗಳಲ್ಲಿ ಭಾಗಿಯಾಗುವ ಅಪರಾಧಿಗೆ 4 ತಿಂಗಳೊಳಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ಇಂಥ ಪ್ರಕರಣಗಳಲ್ಲಿ ಅಧಿಕಾರಿಗಳು ದೂರು ದಾಖಲಿಸಿಕೊಳ್ಳಲು ನಿರ್ಲಕ್ಷ್ಯ ವಹಿಸಿದರೆ, 3 ವರ್ಷಗಳ ಕಾಲ ಜೈಲುವಾಸ ಅನುಭವಿಸಬೇಕಾಗುತ್ತದೆ ಎಂದು ಸುಗ್ರಿವಾಜ್ಞೆಯಲ್ಲಿ ತಿಳಿಸಲಾಗಿದೆ.
ಹೊಸ ಅತ್ಯಾಚಾರ ವಿರೋಧಿ ಕಾನೂನನ್ನು ಸರ್ಕಾರ ಸುಗ್ರೀವಾಜ್ಞೆ ಮೂಲಕ ತಂದಿದ್ದು, ರಾಷ್ಟ್ರಪತಿ ಡಾ. ಆರಿಫ್ ಅಲ್ವಿ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದ್ದಾರೆ. ಪಾಕ್ ಸಂಸತ್ತಿಗೆ ಈ ಮಸೂದೆಯನ್ನು ಅಂಗೀಕರಿಸಲು 120 ದಿನಗಳ ಸಮಯಾವಕಾಶವಿದೆ.