ಬೀಜಿಂಗ್:ಗರ್ಭಧಾರಣೆಯ ಸಂದರ್ಭದಲ್ಲಿ ತಾಯಿ ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದರೆ ಅದು ನವಜಾತ ಶಿಶುವಿನ ಆರೋಗ್ಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲಾರದು ಎಂದು ದಿ ಲ್ಯಾನ್ಸೆಟ್ ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನಾತ್ಮಕ ವರದಿ ಖಚಿತಪಡಿಸಿದೆ.
ಗರ್ಭಧಾರಣೆಯ ಮೂರನೇ ತಿಂಗಳಾವಧಿಯಲ್ಲಿರುವ ಚೀನಾದ ವುಹಾನ್ ನಗರದ 9 ಮಹಿಳೆಯನ್ನು ಈ ಬಗ್ಗೆ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿತ್ತು. ಈ ಗರ್ಭಿಣಿಯರು COVID-19 ಕಾರಣ ನ್ಯುಮೋನಿಯಾದಿಂದ ಬಳಲುತ್ತಿದ್ದರು. ಆದ್ರೆ ಜನಿಸಿದ ಮಕ್ಕಳಲ್ಲಿ ಯಾವುದೇ ರೀತಿಯ ವೈರಸ್ ಕಂಡು ಬಂದಿಲ್ಲ ಹಾಗೂ ಮಹಿಳೆಯರು ಕೂಡ ಈ ಸಮಯದಲ್ಲಿ ಮರಣ ಹೊಂದಿಲ್ಲವೆಂದು ಸಂಶೋಧಕರು ತಿಳಿಸಿದ್ದಾರೆ.
ಈ ಸಂಶೋಧನೆಯೂ ಸೀಮಿತ ಸಂಖ್ಯೆಯ ಪ್ರಕರಣಗಳನ್ನು ಆಧರಿಸಿದೆ. ಗರ್ಭಧಾರಣೆಗೆ ವಿಳಂಬವಾದಂತಹವರು ಮತ್ತು ಸಿಸೇರಿಯನ್ ಮೂಲಕ ಜನ್ಮ ನೀಡಿದ ಮಹಿಳೆಯರನ್ನು ಒಳಗೊಂಡಿದೆ ಎಂದು ಅಧ್ಯಯನ ತಂಡವು ಹೇಳಿದೆ.
ಗರ್ಭಧಾರಣೆಯ ಮೊದಲ ಅಥವಾ ಎರಡನೇಯ ತ್ರೈಮಾಸಿಕದಲ್ಲಿ ತಾಯಂದಿರು ವೈರಸ್ ಸೋಂಕಿಗೆ ಒಳಗಾಗುವುದರಿಂದ ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಹಾಗೆಯೇ ಜನನದ ಸಮಯದಲ್ಲಿ ವೈರಸ್ ಸೋಂಕು ತಾಯಿಯಿಂದ ಮಗುವಿಗೆ ತಗುಲಬಹುರು ಎಂದು ಹೇಳಲಾಗಿದೆ.
"ಈ ಪ್ರಕರಣದ ಅನೇಕ ಪ್ರಮುಖ ವೈದ್ಯಕೀಯ ವಿವರಗಳು ಕಾಣೆಯಾಗಿವೆ ಎಂಬುದನ್ನು ನಾವಿಲ್ಲಿ ಗಮನಿಸುವುದು ಮುಖ್ಯವಾಗಿದೆ. ಈ ಕಾರಣಕ್ಕಾಗಿ, ಗರ್ಭಾಶಯದ ಸೋಂಕು ಸಾಧ್ಯವೇ ಎಂದು ನಾವು ಈ ಒಂದು ಪ್ರಕರಣದಿಂದ ತೀರ್ಮಾನಿಸಲು ಸಾಧ್ಯವಿಲ್ಲ. ಅದೇನೇ ಇದ್ದರೂ, ತಾಯಿಯಿಂದ ಮಗುವಿಗೆ ಸೋಂಕು ತಟ್ಟದಂತೆ ತಡೆಗಟ್ಟಲು ನವಜಾತ ಶಿಶುಗಳ ಮೇಲೆ ವಿಶೇಷ ಗಮನ ನೀಡುವುದನ್ನು ಮುಂದುವರಿಸಬೇಕು" ಎಂದು ಅಧ್ಯಯನದ ಪ್ರಮುಖ ಲೇಖಕ ಆಸ್ಪತ್ರೆಯ ಪ್ರೊಫೆಸರ್ ಯುವಾನ್ಜೆನ್ ಜಾಂಗ್ ಹೇಳಿದ್ದಾರೆ.
ಈ ಕುರಿತು ಇನ್ನು ಹೆಚ್ಚಿನ ಅಧ್ಯಯನ ಅವಶ್ಯಕವಾಗಿದೆ. ಕಾರಣ ಗರ್ಭಿಣಿಯರು ಈ ಸಮಯದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಹೊಂದಿರುವುದಿಲ್ಲ. ಗರ್ಭಧಾರಣೆಗೆ ಸಂಬಂಧಿಸಿದ ದೈಹಿಕ ಬದಲಾವಣೆಗಳಿಂದಾಗಿ ಹೆಚ್ಚಿನ ಅಪಾಯವನ್ನು ಎದುರಿಸಬಹುದು ಎಂದು ಯಾಂಗ್ ಹೇಳಿದ್ದಾರೆ.
COVID-19 ಸೋಂಕಿನಿಂದ ನ್ಯುಮೋನಿಯಾ ಹೊಂದಿದ್ದ ಒಂಬತ್ತು ಮಂದಿ ಗರ್ಭಿಣಿಯರ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಈ ಮಹಿಳೆಯರಲ್ಲಿ ಆರು ಮಹಿಳೆಯರ ಆಮ್ನಿಯೋಟಿಕ್ ದ್ರವ, ರಕ್ತ, ನವಜಾತ ಶಿಶುಗಳ ಗಂಟಲು ಸ್ವ್ಯಾಬ್ ಮತ್ತು ಎದೆ ಹಾಲಿನ ಮಾದರಿಗಳನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿದೆ. ಇವರೆಲ್ಲಾ 26 ರಿಂದ 40 ವರ್ಷದ ವಯಸ್ಸಿನ ಮಹಿಳೆಯರಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.