ಥಿಂಪು(ಭೂತಾನ್):ಪ್ರಸ್ತುತ ಭೂತಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ರಾಯಲ್ ಯುನಿವರ್ಸಿಟಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದು, ವಿವಿಧ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ರಾಯಲ್ ವಿವಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭೂತಾನ್ನ ವಿಜ್ಞಾನಿಗಳು ಭಾರತಕ್ಕೆ ಆಗಮಿಸಿ ಭೂತಾನ್ನ ಸಣ್ಣ ಸ್ಯಾಟಲೈಟ್ ನಿರ್ಮಿಸುವ ದಿನಗಳು ದೂರವಿಲ್ಲ. ಆ ದಿನ ಸದ್ಯದಲ್ಲೇ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭೂತಾನ್ ರಾಯಲ್ ಯುನಿವರ್ಸಿಟಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಭೂತಾನ್ ದೇಶ ಸಾಮರಸ್ಯವನ್ನು ಪ್ರತಿಪಾದನೆ ಮಾಡುತ್ತಿದೆ. ಇದು ವಿದ್ಯಾರ್ಥಿ ದೆಸೆಯಿಂದಲೇ ಆರಂಭವಾಗುತ್ತದೆ ಎನ್ನುವುದು ನಾನಿಲ್ಲಿ ಬಂದಿಳಿದಾಗ ದೊರೆತ ಸ್ವಾಗತದಿಂದ ಅರಿವಿಗೆ ಬಂತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರಾಯಲ್ ಯುನಿವರ್ಸಿಟಿಯಲ್ಲಿ ಭಾರತದ ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಸ್ತಾಪಿಸಿದ ಮೋದಿ, ವಿಶ್ವದ ಅತಿ ದೊಡ್ಡ ಆರೋಗ್ಯ ಯೋಜನೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ವಿಶ್ವದಲ್ಲೇ ಕನಿಷ್ಠ ದರದಲ್ಲಿ ಇಂಟರ್ನೆಟ್ ಸೇವೆಯನ್ನು ನೀಡುವ ದೇಶಗಳಲ್ಲಿ ಭಾರತವೂ ಒಂದು ಮತ್ತು ಇದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೋಟ್ಯಂತರ ಜನರನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದೆ ಎಂದಿದ್ದಾರೆ.
ಭಾರತ ಹಾಗೂ ಭೂತಾನ್ ಗಡಿ ವಿಚಾರದಲ್ಲಿ ಮಾತ್ರವಲ್ಲದೆ ಸಂಪ್ರದಾಯ, ಇತಿಹಾಸದಿಂದ ಉಭಯ ದೇಶಗಳ ನಡುವೆ ನಿಕಟ ಸಂಪರ್ಕ ನಿರ್ಮಾಣವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.