ನ್ಯೂಜಿಲೆಂಡ್: ಸಾಧಾರಣವಾಗಿ ಅಧಿವೇಶನದ ವೇಳೆ ಸದ್ಯಸರ ವಾಗ್ವಾದ, ಪ್ರತಿಪಕ್ಷಗಳ ಆರೋಪಗಳು, ಅಧಿಕಾರ ಪಕ್ಷದ ವಿವರಣೆಗಳು ಕೇಳಿ ಬರುತ್ತವೆ. ಆದ್ರೆ ನ್ಯೂಜಿಲೆಂಡ್ ಸಂಸತ್ ಭವನದಲ್ಲಿ ಆಸಕ್ತಿಕರ ಘಟನೆಯೊಂದು ನಡೆದಿದೆ.
ಹೌದು, ನ್ಯೂಜಿಲೆಂಡ್ ಸಂಸತ್ ಭವನದಲ್ಲಿ ನಡೆಯುತ್ತಿದ್ದ ಅಧಿವೇಶನದಲ್ಲಿ ವಾದ-ವಿವಾದಗಳ ನಡುವೆ ಮಗುವಿನ ಅಳುತ್ತಿರುವ ಶಬ್ದವೂ ಕೇಳಿ ಬಂತು. ಸಂಸದ ತಮಟಿ ಕಾಫಿ ಅಧಿವೇಶನಕ್ಕೆ ತನ್ನ ಒಂದು ತಿಂಗಳ ಮಗುವಿನೊಂದಿಗೆ ಆಗಮಿಸಿದ್ದರು. ಚರ್ಚೆ ನಡೆಯುತ್ತಿದ್ದ ವೇಳೆ ಮಗು ಅಳುತ್ತಿದೆ. ಇದನ್ನು ಗಮನಿಸಿದ ಸ್ಪೀಕರ್ ಮಗುವನ್ನು ತನ್ನ ಬಳಿ ಎತ್ತಿಕೊಂಡು ಬಾಟಲಿ ಮೂಲಕ ಹಾಲು ಕುಡಿಸಿದರು. ಬಳಿಕ ಮಗುವಿನ ಜೊತೆ ಐದು ನಿಮಿಷಗಳ ಕಾಲ ಕಳೆದರು. ಮಗುವಿನ ತುಂಟ ನಗುವಿಗೆ ಸ್ಪೀಕರ್ ಟ್ರೆವರ್ ಮಲ್ಲಾರ್ಡ್ ಮನಸೋತರು.