ಕಠ್ಮಂಡು(ನೇಪಾಳ): ಭಾರತದ ಪ್ರಬಲ ವಿರೋಧದ ನಡುವೆಯೂ ವಿವಾದಿತ ನಕ್ಷೆ ತಿದ್ದುಪಡಿ ಮಸೂದೆಗೆ (ಕೋಟ್ ಆಫ್ ಆರ್ಮ್ಸ್) ನೇಪಾಳ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಸಹಿ ಹಾಕಿದ್ದಾರೆ.
ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರು ಸಂವಿಧಾನದ 274 (10) ನೇ ವಿಧಿಯ ಮಸೂದೆಯನ್ನು ದೃಢೀಕರಿಸಿದರು. ಇದರೊಂದಿಗೆ, ಹೊಸ ನಕ್ಷೆಯ ಅನುಷ್ಠಾನ ಪ್ರಕ್ರಿಯೆಯು ಅಧಿಕೃತವಾಗಿ ಪೂರ್ಣಗೊಂಡಿದೆ ಎಂದು ವರದಿಯಾಗಿದೆ.
ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ನ್ಯಾಷನಲ್ ಅಸೆಂಬ್ಲಿ ಅಂಗೀಕರಿಸಿದ ಮಸೂದೆಯನ್ನು ಅಧ್ಯಕ್ಷರು ಅನುಮೋದಿಸಿದ್ದಾರೆ. ಹೀಗಾಗಿ ನೇಪಾಳದ ಕೋಟ್ ಆಫ್ ಆರ್ಮ್ಸ್ ಈಗ ಭಾರತದ ಲಿಂಪಿಯಾಧುರಾ, ಲಿಪುಲೆಖ್ ಮತ್ತು ಕಾಲಾಪಾನಿ ಪ್ರದೇಶಗಳನ್ನು ಸೇರಿಕೊಂಡ ಹೊಸ ನಕ್ಷೆಯನ್ನು ಒಳಗೊಂಡಿರುತ್ತದೆ.
ಈ ವಿವಾದಿತ ನೇಪಾಳದ ನಕ್ಷೆಯಲ್ಲಿ ಭಾರತದ ಕೆಲ ಪ್ರದೇಶವನ್ನು ಸೇರಿಸಿಕೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ನ್ಯಾಷನಲ್ ಅಸೆಂಬ್ಲಿ ಅಂಗೀಕರಿಸಿದ ಮಸೂದೆಯನ್ನು ಭಾರತವು ಅಸಮರ್ಥನೀಯ ಎಂದು ಕರೆದಿದೆ.
ಇದಕ್ಕೂ ಮೊದಲು ನೂತನ ನಕ್ಷೆ ತಿದ್ದುಪಡಿ ಮಸೂದೆ(ಕೋಟ್ ಆಫ್ ಆರ್ಮ್ಸ್)ಯನ್ನು ನೇಪಾಳದ ಮೇಲ್ಮನೆಯಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಪ್ರಸ್ತಾಪದ ಪರ 57 ಸದಸ್ಯರು ಮತ ಚಲಾಯಿಸಿದ್ರೆ, ಪ್ರಸ್ತಾಪದ ವಿರುದ್ಧ ಯಾರೂ ಕೂಡ ಮತ ಚಲಾಯಿಸಿರಲಿಲ್ಲ.