ಕಠ್ಮಂಡು: ಭಾರತದೊಂದಿಗಿನ ಗಡಿ ವಿವಾದದ ನಡುವೆ ನೇಪಾಳ ತನ್ನ ನಕ್ಷೆಯನ್ನು ಬದಲಿಸಲು ಹೊರಟಿದ್ದು, ನಕ್ಷೆ ಬದಲಾಯಿಸುವ ಅನುಮೋದನೆಯನ್ನು ಇಲ್ಲಿನ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದೆ.
ಭಾರತದ ಪ್ರದೇಶಗಳನ್ನು ತನ್ನದು ಎಂದು ಹೇಳಿಕೊಂಡಿರುವ ನೇಪಾಳ, ಈಗ ನೂತನ ನಕ್ಷೆಯನ್ನು ಸಿದ್ಧಪಡಿಸಿದೆ ಎನ್ನಲಾಗಿದ್ದು, ಆಡಳಿತಾರೂಢ ಎಡ ಮೈತ್ರಿ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶಿವಮಯ ತುಂಬಹಂಗ್ ಫೆ ಅವರು ಈ ಮಸೂದೆಯನ್ನು ಮಂಡಿಸಿದ್ದು, ಮುಖ್ಯ ವಿರೋಧ ಪಕ್ಷದ ನೇಪಾಳಿ ಕಾಂಗ್ರೆಸ್ ಕೂಡ ಈ ಶಾಸನವನ್ನು ಬೆಂಬಲಿಸಿದೆ. ಇದು ನೇಪಾಳ ಸಂವಿಧಾನದ ಎರಡನೇ ತಿದ್ದುಪಡಿಯಾಗಿದೆ.
ಮಸೂದೆಯು ಸಂವಿಧಾನದ 3ನೇ ವೇಳಾಪಟ್ಟಿಯಲ್ಲಿ ಸೇರಿಸಲಾದ ನೇಪಾಳದ ರಾಜಕೀಯ ನಕ್ಷೆಯನ್ನು ತಿದ್ದುಪಡಿ ಮಾಡಲಿದೆ. ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಮೂಲಕ ಅನುಮೋದಿಸಿದ ನಂತರ ಹೊಸ ನಕ್ಷೆಯನ್ನು ಕೋಟ್ ಆಫ್ ಆರ್ಮ್ಸ್ ಸೇರಿದಂತೆ ಎಲ್ಲಾ ಅಧಿಕೃತ ದಾಖಲೆಗಳಲ್ಲಿ ಬಳಸಲಾಗುತ್ತದೆ.
ಇನ್ನು ಮಸೂದೆಯನ್ನು ಅನುಮೋದಿಸುವ ಮೊದಲು ಸಂಸತ್ತು ಈ ಪ್ರಸ್ತಾಪವನ್ನು ಚರ್ಚಿಸಲಿದೆ. ಸಂಸತ್ತಿನ ಉಭಯ ಸದನಗಳು ಅನುಮೋದನೆ ನೀಡಿದ ನಂತರ, ಮಸೂದೆಯನ್ನು ಹೊರಡಿಸಲು ರಾಷ್ಟ್ರಪತಿಗಳು ಆದೇಶ ನೀಡುತ್ತಾರೆ.