ಕಠ್ಮಂಡು (ನೇಪಾಳ) :ಸಾಂವಿಧಾನಿಕ ನಿಬಂಧನೆಗಳ ಪ್ರಕಾರ ಪ್ರತಿನಿಧಿಗಳ ಸದನವನ್ನು ವಿಸರ್ಜಿಸಲಾಗಿದೆ ಎಂದು ಹೇಳಿರುವ ನೇಪಾಳದ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ, ಈ ವಿಷಯದ ಬಗ್ಗೆ ತಮ್ಮ ನಿರ್ಧಾರ ರದ್ದುಗೊಳಿಸಲು ಅಥವಾ ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ. ಪ್ರಧಾನಿ ಕೆ.ಪಿ.ಶರ್ಮಾ ಓಲಿ ಶಿಫಾರಸ್ಸಿನ ಮೇರೆಗೆ ಅಧ್ಯಕ್ಷೆ ಭಂಡಾರಿ, ಮೇ 22ರಂದು ಐದು ತಿಂಗಳಲ್ಲಿ ಎರಡನೇ ಬಾರಿಗೆ ಕೆಳಮನೆ ವಿಸರ್ಜಿಸಿದರು. ನವೆಂಬರ್ 12 ಮತ್ತು ನವೆಂಬರ್ 19ರಂದು ಕ್ಷಿಪ್ರ ಚುನಾವಣೆಗಳನ್ನು ನಡೆಸುವುದಾಗಿ ಘೋಷಿಸಿದರು.
ಪ್ರಧಾನಿ ಓಲಿ, ಮೇ 21ರ ಸರ್ಕಾರದ ತೀರ್ಪಿನ ಬಗ್ಗೆ ತಮ್ಮ ಸ್ಪಷ್ಟೀಕರಣಗಳನ್ನು ಸುಪ್ರೀಂಕೋರ್ಟ್‌ಗೆ ಲಿಖಿತವಾಗಿ ತಿಳಿಸಿದ್ದರು. ಬಳಿಕ ಜೂನ್ 9ರಂದು ಸಾಂವಿಧಾನಿಕ ಪೀಠವು ತಮ್ಮ ಸ್ಪಷ್ಟೀಕರಣಗಳನ್ನು ಲಿಖಿತವಾಗಿ ನೀಡುವಂತೆ ಕೇಳಿತ್ತು. ರಾಷ್ಟ್ರಪತಿ ಮತ್ತು ಪ್ರಧಾನಿ ತಮ್ಮ ನಿರ್ಧಾರಗಳನ್ನು ಸಮರ್ಥಿಸಿಕೊಂಡರೆ, ಸ್ಪೀಕರ್ ಸಪ್ಕೋಟಾ ಸದನ ವಿಸರ್ಜಿಸುವುದನ್ನು ಅಸಂವಿಧಾನಿಕ ಕ್ರಮ ಎಂದು ಉಲ್ಲೇಖಿಸಿದರು.
"ಸಂವಿಧಾನದ 76ನೇ ಪರಿಚ್ಛೇದದ ಪ್ರಕಾರ ರಾಷ್ಟ್ರಪತಿಗಳು ಕೈಗೊಳ್ಳುವ ಯಾವುದೇ ಕ್ರಮವು ನ್ಯಾಯಾಂಗ ಪರಿಶೀಲನೆಗೆ ಸಂಬಂಧಿಸಿದ ವಿಷಯವಾಗಲು ಸಾಧ್ಯವಿಲ್ಲ" ಎಂದು ಅಧ್ಯಕ್ಷೆ ಬಿದ್ಯಾದೇವಿ ನ್ಯಾಯಾಲಯಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಕಾಯ್ದೆ -2017ರ ಸಂಭಾವನೆ ಮತ್ತು ಪ್ರಯೋಜನಗಳ ಷರತ್ತು 16ಅನ್ನು ಅಧ್ಯಕ್ಷೆ ಭಂಡಾರಿ ಉಲ್ಲೇಖಿಸಿದ್ದಾರೆ. ಈ ಕಾಯಿದೆಯ ಪ್ರಕಾರ ವ್ಯಕ್ತಿಯೊಬ್ಬರ ಬಗ್ಗೆ ರಾಷ್ಟ್ರಪತಿಗಳು ತೆಗೆದುಕೊಳ್ಳುವ ನಿರ್ಧಾರದಲ್ಲಿ ಯಾವುದೇ ನ್ಯಾಯಾಲಯ ಹಸ್ತಕ್ಷೇಪ ಮಾಡುವಂತಿಲ್ಲ.