ನವದೆಹಲಿ/ಜಕಾರ್ತಾ:ನಾವು ಸಮುದ್ರಗಳ ಮೇಲಿನ ಒಡೆತನ, ದೇಶಗಳ ಸಾರ್ವಭೌಮತೆ ಹಾಗೂ ಅಂತಾರಾಷ್ಟ್ರೀಯ ಕಾನೂನನ್ನು ಗೌರವಿಸುತ್ತೇವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಚೀನಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂಡೋನೇಷ್ಯಾಗೆ ಭೇಟಿ ನೀಡಿದ್ದ ಪೊಂಪಿಯೋ ಅಲ್ಲಿನ ರಾಜಧಾನಿ ಜಕಾರ್ತಾದಲ್ಲಿ ಅಲ್ಲಿನ ವಿದೇಶಾಂಗ ಸಚಿವ ರೆಟ್ನೋ ಮರ್ಸೂದಿ ಅವರೊಂದಿಗೆ ಸಂವಾದದಲ್ಲಿ ಮಾತನಾಡಿದರು. ದಕ್ಷಿಣ ಚೀನಾ ಸಮುದ್ರದ ಮೇಲೆ ಪೂರ್ಣ ಪ್ರಮಾಣದ ಒಡೆತನ ಸಾಧಿಸಲು ಯತ್ನಿಸುತ್ತಿರುವ ಚೀನಾದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಇಂಡೋನೇಷ್ಯಾ ಅಸಿಯಾನ್ ಹಾಗೂ ವಿಶ್ವಸಂಸ್ಥೆಯಂತಹ ವಿವಿಧ ಸಂಸ್ಥೆಗಳಲ್ಲಿ ನಾಯಕತ್ವ ತೋರುತ್ತಿದೆ ಎಂದು ಇಂಡೋನೇಷ್ಯಾ ಸರ್ಕಾರಕ್ಕೆ ಪೊಂಪಿಯೋ ಶ್ಲಾಘನೆ ವ್ಯಕ್ತಪಡಿಸಿದರು. ಇದರ ಜೊತೆಗೆ ಮರ್ಸೂದಿ ಭಯೋತ್ಪಾದನೆ ವಿರುದ್ಧ ಕೈಜೋಡಿಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ದಕ್ಷಿಣ ಚೀನಾ ಸಮುದ್ರದ ವಿಚಾರ ಪ್ರಸ್ತಾಪವೇಕೆ?
ದಕ್ಷಿಣ ಚೀನಾ ಸಮುದ್ರ ಚೀನಾಗೆ ಅತ್ಯಂತ ಮಹತ್ವದ್ದಾಗಿದ್ದು, ಈ ಸಮುದ್ರದ ಮುಖಾಂತರ ಬಹುಪಾಲು ಸಾಗರೋತ್ತರ ವ್ಯವಹಾರಗಳು ನಡೆಯುತ್ತವೆ. ಇದರ ಜೊತೆಗೆ ದಕ್ಷಿಣ ಚೀನಾ ಸಮುದ್ರದದ ಬಳಿಯಿರುವ ಕೆಲವು ರಾಷ್ಟ್ರಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಚೀನಾ ಮುಂದಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
ಇಷ್ಟು ಮಾತ್ರವಲ್ಲದೇ ಭಾರತದ ವಿದೇಶಿ ವ್ಯವಹಾರಗಳ ಮೇಲೆಯೂ ಪರಿಣಾಮ ಬೀರಲು ಈ ಸಮುದ್ರವನ್ನು ಚೀನಾ ಬಳಸಿಕೊಳ್ಳುತ್ತಿದೆ. ಲಡಾಖ್ ಘರ್ಷಣೆಯ ನಂತರ ಕೆಲವು ಯುದ್ಧನೌಕೆಗಳನ್ನೂ ಚೀನಾ ಸಮುದ್ರದಲ್ಲಿ ನಿಲ್ಲಿಸಿ, ಭಾರತಕ್ಕೆ ಬೆದರಿಕೆಯೊಡ್ಡಿತ್ತು.
ಅಮೆರಿಕವೂ ಚೀನಾವನ್ನು ನಿಯಂತ್ರಿಸಲು ಮುಂದಾಗಿದ್ದು, ಕೆಲವು ತಿಂಗಳುಗಳ ಹಿಂದೆ ದಕ್ಷಿಣ ಚೀನಾ ಸಮುದ್ರ ಪಾರುಪತ್ಯ ಚೀನಾದ್ದು ಮಾತ್ರವಲ್ಲ ಎಂದು ಹೇಳಿತ್ತು. ಇದು ಮಾತ್ರವಲ್ಲದೇ ಅಂತಾರಾಷ್ಟ್ರೀಯ ಕಾನೂನುಗಳನ್ನು ಆಧರಿಸಿ, ಸಮದ್ರದ ಮೇಲಿನ ವಿವಾದ ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡಿತ್ತು. ಆದರೂ ಚೀನಾ ತನ್ನ ಸಮುದ್ರ ಕಬಳಿಕೆ ದಾಹ ಹೆಚ್ಚಾಗಿದೆ ಎಂಬುದು ಅಮೆರಿಕ ಆರೋಪ ಮಾಡುತ್ತಿದೆ.