ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಿಗಳು 'ಹೊಸ ಮಾಧ್ಯಮ ಮಾರ್ಗಸೂಚಿ' ಬಿಡುಗಡೆ ಮಾಡಿದ್ದು, ತಾಲಿಬಾನ್‌ಗಳ ಹಿತಾಸಕ್ತಿಗೆ ವಿರುದ್ಧವಾಗಿ ಯಾವುದೇ ಮಾಧ್ಯಮ ಅಥವಾ ಸಂಸ್ಥೆಗಳು ಸುದ್ದಿ ಪ್ರಕಟಿಸುವಂತಿಲ್ಲ ಎಂದು ಸೂಚಿಸಿದೆ.
ಅಫ್ಘಾನಿಸ್ತಾನದ ಪತ್ರಕರ್ತರ ಸುರಕ್ಷತಾ ಸಮಿತಿ ತನ್ನ ಇತ್ತೀಚಿನ ವರದಿಯಲ್ಲಿ, ಬಡಾಖಾನ್ ಪ್ರಾಂತ್ಯದ ತಾಲಿಬಾನ್ ಗುಂಪಿನ ಹಿತಾಸಕ್ತಿಗೆ ವಿರುದ್ಧವಾಗಿ ಸುದ್ದಿ ಪ್ರಕಟಿಸಲು ಯಾವುದೇ ಮಾಧ್ಯಮ ಅಥವಾ ಸುದ್ದಿ ಸಂಸ್ಥೆಗಳಿಗೆ ಅನುಮತಿ ಇಲ್ಲ ಎಂದು ಘೋಷಿಸಿದೆ.
ಯಾವುದೇ ಮಾಧ್ಯಮಗಳು ತಾಲಿಬಾನ್ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ, ಸರ್ಕಾರದ ಸಾಮರ್ಥ್ಯದ ಕೊರತೆ ಅಥವಾ ಜನರೊಂದಿಗೆ ತಾಲಿಬಾನ್ ವರ್ತನೆಯ ಕುರಿತು ವರದಿ ಮಾಡಲು ಸಾಧ್ಯವಿಲ್ಲ ಎಂದು ಖಾಮಾ ಪ್ರೆಸ್ ತಿಳಿಸಿದೆ.
ನ್ಯೂಸ್ ವರದಿ ಮಾಡುವ ಉದ್ದೇಶಕ್ಕಾಗಿ ಮಹಿಳೆಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಅವಕಾಶವಿಲ್ಲ ಎಂದು ಪ್ರಾಂತೀಯ ಮಾಹಿತಿ ಮತ್ತು ಸಂಸ್ಕೃತಿ ನಿರ್ದೇಶಕ ಮುಜುದ್ದೀನ್ ಅಹ್ಮದಿ ಹೇಳಿದ್ದಾರೆ. ಆದರೆ, ಮಹಿಳಾ ಮಾಧ್ಯಮ ಸಿಬ್ಬಂದಿ ಕಚೇರಿಯಲ್ಲಿ ಕೆಲಸ ಮಾಡಬಹುದು ಎಂದು ಎಜೆಎಸ್‌ಸಿ ಹೇಳಿದೆ ಎಂದು ಖಾಮಾ ಪ್ರೆಸ್ ತಿಳಿಸಿದೆ.
ಇದನ್ನೂ ಓದಿ:ನಾಂದೇಡ್ ಹೋಟೆಲ್ನಲ್ಲಿ ಅಗ್ನಿ ಅವಘಡ : ಭಾರಿ ಅನಾಹುತ ತಪ್ಪಿಸಿದ ಅಗ್ನಿಶಾಮಕ ದಳ
ಕಳೆದ ಒಂದು ವಾರದ ಹಿಂದೆ ತಾಲಿಬಾನ್ ಸರ್ಕಾರ ಮಹಿಳೆಯರ ಕುರಿತಾಗಿ ಹೊಸ ಧಾರ್ಮಿಕ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಟಿವಿಗಳಲ್ಲಿ ನಿರೂಪಣೆ ಮಾಡುವ ಮಹಿಳೆಯರು ಕಡ್ಡಾಯವಾಗಿ ಹಿಜಾಬ್ ಧರಿಸಬೇಕು ಹಾಗೂ ಮಹಿಳೆಯರು ನಟಿಸಿರುವ ನಾಟಕಗಳನ್ನು ಪ್ರಸಾರ ಮಾಡಬಾರದು ಎಂದು ಆದೇಶಿಸಲಾಗಿದೆ.
ಜೊತೆಗೆ ಪ್ರವಾದಿ ಮಹಮ್ಮದ್ ಹಾಗೂ ಇತರ ಧಾರ್ಮಿಕ ನಾಯಕರನ್ನು ಕುರಿತಂತೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಿಲ್ಲ. ಇಸ್ಲಾಂ ಮತ್ತು ಆಫ್ಘನ್‌ನ ಸಂಸ್ಕೃತಿಗೆ ಧಕ್ಕೆ ಉಂಟು ಮಾಡುವ ವಿಷಯಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿತ್ತು.
ಇದಕ್ಕೂ ಮೊದಲು ಶಾಲಾ ಕಾಲೇಜುಗಳಿಗೆ ಹೋಗಲು ಬಯಸುವ ಮಹಿಳೆಯರು ಬುರ್ಖಾ ಧರಿಸುವುದು ಕಡ್ಡಾಯ ಎಂಬ ನಿಯಮವನ್ನು ತಾಲಿಬಾನ್ ಹೊರಡಿಸಿತ್ತು. ಪತ್ರಿಕಾ ಸ್ವಾತಂತ್ರ್ಯದ ಕುರಿತು ಮಾತನಾಡಿದ ಹಲವು ಪತ್ರಕರ್ತೆಯರ ಮೇಲೆ ದಾಳಿ ಮಾಡಲಾಗಿತ್ತು.
ಇದನ್ನೂ ಓದಿ:ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭ.. 3 ಕೃಷಿ ಕಾನೂನುಗಳು ವಾಪಸ್!
ತಾಲಿಬಾನ್‌ಗಳ ಭಯಕ್ಕೆ ಅನೇಕ ಪತ್ರಕರ್ತರು ದೇಶದಿಂದ ಪಲಾಯನ ಮಾಡಿದರೆ ಇನ್ನೂ ಕೆಲವರು ತಲೆಮರೆಸಿಕೊಂಡಿದ್ದಾರೆ. ಜೊತೆಗೆ ದೇಶದಲ್ಲಿ 257 ಕ್ಕೂ ಹೆಚ್ಚು ಮಾಧ್ಯಮಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ ಎಂದು ಅಫ್ಘಾನಿಸ್ತಾನದಲ್ಲಿ ಮಾಧ್ಯಮ ಬೆಂಬಲಿಸುವ ಸಂಘಟನೆ ನೆಹಾದ್ ರಸಾನಾ-ಎ-ಅಫ್ಘಾನಿಸ್ತಾನ್ (ಎನ್‌ಎಐ) ಹೇಳಿದೆ.
ವಾಚ್‌ಡಾಗ್ ಪ್ರಕಾರ, ಶೇಕಡಾ 70 ರಷ್ಟು ಮಾಧ್ಯಮ ಕಾರ್ಯಕರ್ತರು ನಿರುದ್ಯೋಗಿಗಳಾಗಿದ್ದಾರೆ. ಇವರಲ್ಲಿ ಅನೇಕರು ದೇಶವನ್ನೇ ತೊರೆದಿದ್ದಾರೆ. ಇಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ ಎಂದು ತಿಳಿಸಿದೆ.