ನ್ಯೂಯಾರ್ಕ್/ಬೀಜಿಂಗ್:ಪುಲ್ವಾಮಾ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಜೆಇಎಂ ಮುಖ್ಯಸ್ಥ ಮಸೂದ್ ಅಜರ್ನನ್ನು ಜಾಗತಿಕ ಉಗ್ರನೆಂದು ಘೋಷಿಸಲು ವಿಶ್ವ ಸಂಸ್ಥೆಯಲ್ಲಿ ಇದುವರೆಗೂ ಅಡ್ಡಗಾಲು ಹಾಕುತ್ತಿದ್ದ ಚೀನಾ ಕೊನೆಗೂ ಭಾರತದ ಎದುರು ಮಂಡಿಯೂರುವ ಸ್ಥಿತಿಗೆ ಬಂದಿದೆ.
ಮಸೂದ್ ಅಜರ್ನನ್ನು ನಿಷೇಧ ಹೇರುವ ಕುರಿತು ತನ್ನ ಸ್ಪಷ್ಟ ನಿಲುವು ತಿಳಿಸಲು ವಿಶ್ವ ಸಂಸ್ಥೆ ಚೀನಾಗೆ ಮೇ 1ರ ಬೆಳಗ್ಗೆ 9 ಗಂಟೆಯವರೆಗೂ ಅಂತಿಮ ಗಡುವು ನೀಡಿದೆ. ಜೊತೆಗೆ ಸೂಕ್ತ ಎಚ್ಚರಿಕೆ ಸಹ ರವಾನಿಸಿದೆ ಎಂದು ಅಮೆರಿಕದ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಇಂದು ವಿಶ್ವ ಸಂಸ್ಥೆಯ ಸಭೆ ನಡೆಯುತ್ತಿದ್ದು, ಸಂಜೆಯ ವೇಳೆಗೆ ಜೈಷ್ ಎ ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನಿಷೇಧಿಸುವ ಚೀನಾದ ಅಂತಿಮ ತೀರ್ಮಾನ ಹೊರ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ವಿಶ್ವ ಸಂಸ್ಥೆಯ 1,267 ಭದ್ರತಾ ಸಮಿತಿಯ ಸಭೆ ಏಪ್ರಿಲ್ 23ರಂದು ನಡೆಸಿದ್ದು, ಮಸೂದ್ ಅಜರ್ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡುವ ಬಗ್ಗೆ ಚರ್ಚಿಸಿತ್ತು. ಈ ವೇಳೆ ಚೀನಾ ಹಾಗೂ ಅಮೆರಿಕ ವಿಶ್ವ ಸಂಸ್ಥೆಯ ನಿಲುವಿಗೆ ಪರಸ್ಪರ ವಿರೋಧ ತಳೆದಿದ್ದವು ಎಂದು ರಾಯಭಾರಿಯೊಬ್ಬರು ಹೇಳಿದ್ದಾರೆ.
ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮೇ ತಿಂಗಳ ಮಧ್ಯದವರೆಗೂ ಕಾಲಾವಕಾಶ ನೀಡುವಂತೆ ಚೀನಾ ಕೋರಿತ್ತು. ಅಜರ್ನನ್ನು ಕಪ್ಪು ಪಟ್ಟಿಗೆ ಸೇರಿಸಲು ಏಪ್ರಿಲ್ 23ಕ್ಕಿಂತ ಹೆಚ್ಚಿನ ದಿನ ತೆಗೆದುಕೊಳ್ಳುವ ಚೀನಾ ನಿರ್ಧಾರಕ್ಕೆ ಅಮೆರಿಕ ಆಕ್ಷೇಪ ವ್ಯಕ್ತಪಡಿಸಿತು.
ಚೀನಾದಲ್ಲಿ ರಾಜತಾಂತ್ರಿಕ ನಡೆ
ಕಳೆದ ವಾರ ಬೀಜಿಂಗ್ನಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು, ಚೀನಾ ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಫೆಬ್ರವರಿ 14ರ ಪುಲ್ವಾಮ ದಾಳಿಯಲ್ಲಿ ಅಜರ್ ಕೈವಾಡ ಇರುವ ಸಾಕ್ಷ್ಯಾದಾರ ದಾಖಲೆಗಳನ್ನು ನೀಡಿದರು. 'ಇದಕ್ಕೆಲ್ಲ ಜೈಷ್ ಎ ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಮುಖ್ಯಸ್ಥನೇ ಜವಾಬ್ದಾರ' ಎಂದು ಹೇಳಿದ್ದರು.
ಭಾರತಕ್ಕೆ 4 ವಿಟೋ ರಾಷ್ಟ್ರಗಳ ಬಲ
ಭಾರತಕ್ಕೆ ಬಂಬಲವಾಗಿ ಅಮೆರಿಕ, ಬ್ರಿಟನ್ ಹಾಗೂ ಫ್ರಾನ್ಸ್ ಚೀನಾದ ಮೇಲೆ ರಾಜತಾಂತ್ರಿಕ ಒತ್ತಡ ಹೇರುತ್ತಿದ್ದಾರೆ. ಒಂದು ವೇಳೆ ಚೀನಾ ತನ್ನ ನಿಲುವು ಹಿಂಪಡೆಯದೇ ಇದ್ದಲ್ಲಿ ವಿಶ್ವ ಸಂಸ್ಥೆಯ ಮುಂದೆ ಪ್ರಸ್ತಾಪಿಸುವ ಬೆದರಿಕೆ ಹಾಕಿವೆ. ಸದ್ಯದ ಎಲ್ಲ ಬೆಳವಣಿಗೆಗಳು ಚೀನಾದ ವಿರುದ್ಧವಾಗಿದ್ದು, ಅಜರ್ ವಿರುದ್ಧ ಕ್ರಮ ತೆಗದುಕೊಳ್ಳಬೇಕಾದ ಇಕ್ಕಟ್ಟಿನಲ್ಲಿದೆ.
ಪೀಸ್ ಟಿವಿ ಮೇಲೆ ನಿಷೇಧ
ಇದರ ಬೆನ್ನಲ್ಲೇ, ಪ್ರಚೋದನಕಾರಿ ಹೇಳಿಕೆಯ ಮೂಲಕ ಯುವಕರಲ್ಲಿ ದ್ವೇಷದ ಭಾವನೆಗಳನ್ನು ತುಂಬಲಾಗುತ್ತಿದೆ ಎಂಬ ಆಪಾದನೆ ಮೇಲೆ ಪಾಕ್ನ ಪೀಸ್ ಟಿವಿ ಮೇಲೆ ನಿಷೇಧ ಹೇರಲಾಗಿದೆ. ಈ ನಿಷೇಧ ನೆರೆಯ ಬಾಂಗ್ಲಾದಲ್ಲಿಯೂ ಈ ನಿಷೇದ ಜಾರಿಯಲ್ಲಿದೆ.
ಬ್ರಿಟಿಷ್ ಹೈ ಕಮಿಷನರ್ ಡಾಮಿನಿಕ್ ಅಸ್ಕ್ವಿತ್ ಅವರು ಭಾರತದ 'ಆಶಾವಾದ'ದ ಪ್ರಸ್ತಾಪಕ್ಕೆ ಶೀಘ್ರದಲ್ಲೇ ಸಕರಾತ್ಮಕ ಫಲಿತಾಂಶ ಹೊರ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಾಕ್ನ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಜಲ್ ಅವರು ಸಂದರ್ಶನಯೊಂದರಲ್ಲಿ, ಪಾಕಿಸ್ತಾನ ಈ ಪಟ್ಟಿಯ ಬಗ್ಗೆ ಚರ್ಚಿಸಲು ಸಿದ್ಧವಿದೆ. ಆದರೆ, ಪುಲ್ವಾಮಾ ದಾಳಿಯಲ್ಲಿ ಅಜರ್ ಕೈವಾಡ ಇರುವ ಸಾಕ್ಷ್ಯಾದಾರಗಳನ್ನ ಮಾತ್ರ ತಳ್ಳಿ ಹಾಕಿದೆ.