ಕರ್ನಾಟಕ

karnataka

By

Published : Jun 28, 2020, 6:11 PM IST

ETV Bharat / international

ಚೀನಾದ ಬಿಲಿಯನ್​ ಡಾಲರ್​ ಯೋಜನೆಗಳ ಮೇಲೆ ಕೊರೊನ ಪ್ರಭಾವ.. ಡ್ರ್ಯಾಗನ್​ಗೆ ಭಾರೀ ಪೆಟ್ಟು

ಚೀನಾದ ಬಹು-ಶತಕೋಟಿ ಡಾಲರ್ ಯೋಜನೆಗಳ ಮೇಲೆ ಕೊರೊನಾ ಸೋಂಕು ಪ್ರತಿಕೂಲ ಪರಿಣಾಮ ಬೀರಿದ್ದು, ಅಡ್ಡಿಯಾದ ಯೋಜನೆಗಳಲ್ಲಿ 60 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಸೇರಿದೆ ಎಂದು ವರದಿ ತಿಳಿಸಿದೆ.

Majority of China's BRI projects abroad adversely affected by COVID-19
ಬಿಲಿಯನ್​ ಡಾಲರ್​ ಯೋಜನೆಗಳ ಮೇಲೆ ಕೊರೊನ ಪ್ರಭಾವ

ಬೀಜಿಂಗ್: ಚೀನಾದ ಮಹತ್ವಾಕಾಂಕ್ಷೆಯ ಬಹು-ಶತಕೋಟಿ ಡಾಲರ್, ಬೆಲ್ಟ್ & ರೋಡ್ ಇನಿಶಿಯೇಟಿವ್ (ಬಿಆರ್​ಐ) ಅಡಿಯಲ್ಲಿರುವ ಹೆಚ್ಚಿನ ಯೋಜನೆಗಳ ಮೇಲೆ ಕೊರೊನಾ ವೈರಸ್ ಸಾಂಕ್ರಾಮಿಕ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಚೀನಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚೀನಾದ ಜಾಗತಿಕ ಪ್ರಭಾವವನ್ನು ಹೆಚ್ಚಿಸಲು ಏಷ್ಯಾ, ಆಫ್ರಿಕಾ ಮತ್ತು ಯುರೋಪಿನಾದ್ಯಂತ ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಬಿಆರ್‌ಐ ಅಡಿಯ ಯೋಜನೆಯ ಸುಮಾರು ಐದನೇ ಒಂದು ಭಾಗದ ಮೇಲೆ ಸಾಂಕ್ರಾಮಿಕ ರೋಗ ಗಂಭೀರವಾಗಿ ಪರಿಣಾಮ ಬೀರಿದೆ ಎಂದು ವಿದೇಶಾಂಗ ಸಚಿವಾಲಯದ ಅಂತಾರಾಷ್ಟ್ರೀಯ ಆರ್ಥಿಕ ವ್ಯವಹಾರಗಳ ವಿಭಾಗದ ಮಹಾನಿರ್ದೇಶಕ ವಾಂಗ್ ಕ್ಸಿಯಾಲಾಂಗ್ ಹೇಳಿದ್ದಾರೆ.

ಸುಮಾರು 40 ರಷ್ಟು ಯೋಜನೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಮತ್ತು 30 ರಿಂದ 40 ರಷ್ಟು ಯೋಜನೆಗಳ ಮೇಲೆ ಸ್ವಲ್ಪಮಟ್ಟಿಗೆ ಪರಿಣಾಮ ಬೀರಿದೆ ಎಂದು ಹಾಂಗ್ ಕಾಂಗ್ ಮೂಲದ ಪತ್ರಿಕೆ ವರದಿ ಮಾಡಿದೆ.

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ 2013 ರಲ್ಲಿ ಅಧಿಕಾರಕ್ಕೆ ಬಂದಾಗ ಬಿಆರ್‌ಐ ಅನ್ನು ಪ್ರಾರಂಭಿಸಿದರು. ಇದು ಆಗ್ನೇಯ ಏಷ್ಯಾ, ಮಧ್ಯ ಏಷ್ಯಾ, ಕೊಲ್ಲಿ ಪ್ರದೇಶ, ಆಫ್ರಿಕಾ ಮತ್ತು ಯುರೋಪ್‌ಗಳನ್ನು ಭೂ ಮತ್ತು ಸಮುದ್ರ ಮಾರ್ಗದೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಪಾಕಿಸ್ತಾನದ ಬಲೂಚಿಸ್ತಾನದ ಗ್ವಾದರ್ ಬಂದರನ್ನು ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯದೊಂದಿಗೆ ಸಂಪರ್ಕಿಸುವ ಸಿಪಿಇಸಿ, ಬಿಆರ್‌ಐನ ಪ್ರಮುಖ ಯೋಜನೆಯಾಗಿದೆ.

ಈಗಾಗಲೆ ಯೋಜನೆಗಳನ್ನು ಪುನಃ ಪ್ರಾರಂಭಿಸಲು ಚೀನಾ ಕಳೆದ ವಾರ ಬಿಆರ್​ಐನ ಮೊದಲ ವಿಡಿಯೋ ಕಾನ್ಫರೆನ್ಸ್ ನಡೆಸಿತ್ತು. ಅಡ್ಡಿಯಾದ ಯೋಜನೆಗಳಲ್ಲಿ 60 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಕೂಡ ಸೇರಿದೆ ಎಂದು ವರದಿ ತಿಳಿಸಿದೆ.

ಪಾಕ್​ ಆಕ್ರಮಿತ ಕಾಶ್ಮೀರದ ಮೂಲಕ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಮಾಡಲಾಗುತ್ತಿರುವುದರಿಂದ ಭಾರತ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಮಲೇಷ್ಯಾ, ಬಾಂಗ್ಲಾದೇಶ, ಇಂಡೋನೇಷ್ಯಾ, ಪಾಕಿಸ್ತಾನ, ಕಾಂಬೋಡಿಯಾ, ಮತ್ತು ಶ್ರೀಲಂಕಾ ಸೇರಿದಂತೆ ಕೆಲವು ಏಷ್ಯಾದ ದೇಶಗಳು ಚೀನಾ ಅನುದಾನಿತ ಯೋಜನೆಗಳಿಗೆ ಬ್ರೇಕ್​ ಹಾಕಿವೆ ಎಂದು ವರದಿಯಾಗಿದೆ.

ABOUT THE AUTHOR

...view details