ಢಾಕಾ/ ಬಾಂಗ್ಲಾದೇಶ:ಬಹುಸಂಖ್ಯಾತ ಮುಸ್ಲಿಂ ಧರ್ಮಿಯರನ್ನು ಹೊಂದಿರುವ ಢಾಕಾದಲ್ಲಿ ಇದೇ ಮೊದಲ ಬಾರಿಗೆ ತೃತೀಯ ಲಿಂಗಿಗಳಿಗಾಗಿ ಮದರಸಾವನ್ನು ತೆರೆಯಲಾಗಿದೆ.
ಕಮರಂಗಿರ್ಚಾರ್‌ನ ಲೋಹರ್ ಬ್ರಿಡ್ಜ್ ಧಾಲ್‌ನಲ್ಲಿರುವ ವಸತಿ ರಹಿತ ಇಸ್ಲಾಮಿಕ್ ಶಾಲೆಯಾದ ದವಾತುಲ್ ಕುರಾನ್ ತೃತೀಯ ಲಿಂಗಿಗಳಿಗೆ ಮದರಸಾ ಆರಂಭವಾಗಿದೆ. ಇಲ್ಲಿ ಯಾವುದೇ ವಯಸ್ಸಿನ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡಬಹುದು ಎಂದು ವರದಿಯಾಗಿದೆ.
ಶುಕ್ರವಾರ ನಡೆದ ಮದರಸಾ ಉದ್ಘಾಟನೆಯಲ್ಲಿ 40 ಮಂದಿ ತೃತೀಯ ಲಿಂಗಿಗಳು ಭಾಗಿಯಾಗಿದ್ದರು. ಇಸ್ಲಾಮಿಕ್ ಬೋಧನೆಗಳಲ್ಲದೆ, ಮದರಸಾ ಅಧಿಕಾರಿಗಳು ಇವರಿಗೆ ತಾಂತ್ರಿಕ ಶಿಕ್ಷಣದ ಪ್ರತ್ಯೇಕ ವಿಭಾಗವನ್ನು ಪ್ರಾರಂಭಿಸಲು ಮುಂದಾಗಿದ್ದಾರೆ.
2013ರಲ್ಲಿ, ಬಾಂಗ್ಲಾದೇಶ ಸರ್ಕಾರವು ಹಿಜ್ರಾ ಸಮುದಾಯದ ಸದಸ್ಯರನ್ನು 'ತೃತೀಯ ಲಿಂಗಿಗಳು' ಎಂದು ಗುರುತಿಸುವ ನೀತಿಯನ್ನು ಜಾರಿಗೆ ತಂದಿತ್ತು. ಬಳಿಕ ಟ್ರಾನ್ಸ್‌ಜೆಂಡರ್ ಜನರನ್ನು ಮತದಾರರನ್ನಾಗಿ ನೋಂದಾಯಿಸಲು ಚುನಾವಣಾ ಆಯೋಗ ಅನುಮತಿ ನೀಡಿತು. ಇದರ ಫಲವಾಗಿ ಈ ಸಮುದಾಯದ ಸದಸ್ಯರು ಚುನಾವಣೆಯಲ್ಲೂ ಕೂಡ ಸ್ಪರ್ಧಿಸಿದ್ದಾರೆ.