ಲಾಹೋರ್(ಪಾಕಿಸ್ತಾನ):ಶ್ರೀಲಂಕಾ ಪ್ರಜೆಯೊಬ್ಬರ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿ ಸಾರ್ವಜನಿಕವಾಗಿ ಜೀವಂತ ಸುಟ್ಟು ಹಾಕಿದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ 800ಕ್ಕೂ ಹೆಚ್ಚು ಮಂದಿಯ ವಿರುದ್ಧ ಭಯೋತ್ಪಾದನೆ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದ್ದು, ಪ್ರಕರಣದ ಪೊಲೀಸ್ ತನಿಖೆ ಮುಂದುವರೆದಿದೆ.
ಈ 800 ಮಂದಿ ಆರೋಪಿಗಳಲ್ಲಿ 118 ಮಂದಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇವರ ಪೈಕಿ 13 ಪ್ರಮುಖ ಆರೋಪಿಗಳಿದ್ದಾರೆ ಎಂದು ಪಾಕ್‌ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂಬ ಶ್ರೀಲಂಕಾದ ಆಗ್ರಹದ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.
ಘಟನಾ ಸ್ಥಳದಲ್ಲಿ ಪಾಕ್ ಪೊಲೀಸರ ನಿಯೋಜನೆ ಪ್ರಕರಣದ ವಿವರ:
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಧರ್ಮ ನಿಂದನೆಯ ಗಂಭೀರ ಆರೋಪ ಹೊರಿಸಿ ಇಸ್ಲಾಮಿಸ್ಟ್ ಪಕ್ಷ ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ (ಟಿಎಲ್‌ಪಿ) ಕಿಡಿಗೇಡಿಗಳು ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದರ ಜನರಲ್ ಮ್ಯಾನೇಜರ್ ಪ್ರಿಯಂತ ಕುಮಾರ ದಿಯವದನಾ (40) ಎಂಬುವವರ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಸಾರ್ವಜನಿಕವಾಗಿ ಜೀವಂತ ಸುಟ್ಟುಹಾಕಿದ್ದರು.
ಹಿಂಸಾಚಾರದ ವೇಳೆ ಕಾರುಗಳು ಧ್ವಂಸ ಲಾಹೋರ್‌ನಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಸಿಯಾಲ್‌ಕೋಟ್ ಜಿಲ್ಲೆಯಲ್ಲಿದ್ದ ರಾಜ್‌ಕೋ ಇಂಡಸ್ಟ್ರೀಸ್ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಜನರಲ್ ಮ್ಯಾನೇಜರ್ ಆಗಿದ್ದ ದಿಯವದನಾ ಶ್ರೀಲಂಕಾದ ಕ್ಯಾಂಡಿ ನಗರಕ್ಕೆ ಸೇರಿದವರು.
ಇಸ್ಲಾಮಿಕ್ ಪೋಸ್ಟರ್ ಹರಿದು ಹಾಕಿದ್ದಕ್ಕೆ ಕೃತ್ಯ:
ಶುಕ್ರವಾರ ಬೆಳಗ್ಗೆ 10 ಗಂಟೆಗೆ ದಿಯವದನಾ ಅವರು ಫ್ಯಾಕ್ಟರಿಯ ಗೋಡೆಯ ಮೇಲೆ ಅಂಟಿಸಿದ್ದ ಇಸ್ಲಾಮಿಕ್ ಸಂದೇಶಗಳಿದ್ದ ಪೋಸ್ಟರ್ ಹರಿದುಹಾಕಿದ್ದರು. ಈ ವಿಚಾರ ಒಬ್ಬರಿಂದೊಬ್ಬರಿಗೆ ಹರಡಿ ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ ಪಕ್ಷದ ಕಿಡಿಗೇಡಿ ಕಾರ್ಯಕರ್ತರೂ ಸೇರಿದಂತೆ ನೂರಾರು ಮಂದಿ ಕಾರ್ಖಾನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ, ಆತನ ಮೇಲೆ ಹಲ್ಲೆ ಮಾಡಿ, ಸಾರ್ವಜನಿಕವಾಗಿ ಸುಟ್ಟುಹಾಕಿದ್ದಾರೆ. ಇದಲ್ಲದೇ ಅನೇಕ ಕರೆ ಹಿಂಸಾಚಾರಗಳನ್ನೂ ನಡೆಸಿದ್ದಾರೆ.
ಹಿಂಸಾತ್ಮಕ ಕೃತ್ಯದಲ್ಲಿ ಕಟ್ಟಡಕ್ಕೆ ಹಾನಿ ಮಹಿಂದಾ ರಾಜಪಕ್ಸ ಖಂಡನೆ, ಕ್ರಮಕ್ಕೆ ಒತ್ತಾಯ:
ಈ ಅಮಾನವೀಯ ಘಟನೆ ಖಂಡಿಸಿದ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ಅಪರಾಧಿಗಳಿಗೆ ಶಿಕ್ಷೆ ನೀಡುವಂತೆ ಮತ್ತು ಪಾಕಿಸ್ತಾನದಲ್ಲಿರುವ ಶ್ರೀಲಂಕಾ ನಾಗರಿಕರ ರಕ್ಷಣೆಗೆ ಧಾವಿಸುವಂತೆ ಇಮ್ರಾನ್ ಖಾನ್ ಸರ್ಕಾರವನ್ನು ಒತ್ತಾಯಿಸಿದ್ದರು. ಈ ಬೆನ್ನಲ್ಲೇ 800ಕ್ಕೂ ಹೆಚ್ಚು ಮಂದಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದ್ದು, ವಿಚಾರಣೆ ನಡೆಯುತ್ತಿದೆ.
ಇಮ್ರಾನ್ ಖಾನ್ ಖಂಡನೆ, ಕ್ರಮದ ಭರವಸೆ
ಈ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಸಿಯಾಲ್‌ಕೋಟ್‌ನ ಕಾರ್ಖಾನೆಯ ಮೇಲೆ ನಡೆದ ಭೀಕರ ದಾಳಿ ಮತ್ತು ಶ್ರೀಲಂಕಾದ ಮ್ಯಾನೇಜರ್ ಸಜೀವ ದಹನವು ಪಾಕಿಸ್ತಾನಕ್ಕೆ ನಾಚಿಕೆಗೇಡಿನ ಸಂಗತಿ. ನಾನು ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದೇನೆ. ಅಪರಾಧಿಗಳನ್ನು ಕಠಿಣವಾಗಿ ಶಿಕ್ಷಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಮುಂದೆ ಗನ್ ಹಿಡಿದು ನಿಂತ ವ್ಯಕ್ತಿ: ಕೆಲಕಾಲ ಲಾಕ್ಡೌನ್