ಹೇಗ್ (ನೆದರ್ಲ್ಯಾಂಡ್): ಪಾಕಿಸ್ತಾನದಲ್ಲಿ ಬೇಹುಗಾರಿಕಾ ಆರೋಪದಲ್ಲಿ ಬಂಧಿಯಾಗಿರುವ ಕುಲಭೂಷಣ್ ಜಾದವ್ ಅವರು ಪಾಕ್ ಹೆಣೆದ ಸುಳ್ಳು ಜಾಲದಲ್ಲಿ ಸಿಕ್ಕಿದ್ದಾರೆ ಎಂಬ ವಾದಗಳು ಕೇಳಿಬರುತ್ತಿವೆ.
ನೆದರ್ಲ್ಯಾಂಡ್ನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಭಾರತ ಪರ ವಕೀಲ ಹರೀಶ್ ಸಾಳ್ವೆ ಅವರು ಈ ಗಂಭೀರ ಆರೋಪ ಮಾಡಿದ್ದಾರೆ.
ಪಾಕಿಸ್ತಾನವು ತನಗೆ ಬೇಕಾದ ಆರೋಪಗಳನ್ನು ಜಾದವ್ ಅವರ ಮೇಲೆ ಹಾಕಿ, ಅದನ್ನು ಬಲವಂತವಾಗಿ ಒಪ್ಪಿಸಿದೆ ಎಂದು ಸಾಳ್ವೆ ಅವರು ಕೋರ್ಟ್ಗೆ ತಿಳಿಸಿದ್ದಾರೆ.
ಇದೇ ವೇಳೆ ಸಾರ್ಕ್ ದೇಶಗಳ ಒಪ್ಪಂದದಂತೆ ಈ ಪ್ರಕರಣವನ್ನು ಪಾಕಿಸ್ತಾನ ಪರಿಗಣಿಸಿಲ್ಲ ಎಂದೂ ಅವರು ಆರೋಪಿಸಿದ್ದಾರೆ. ಇನ್ನೊಂದೆಡೆ ಭಾರತ ಕುಲಭೂಷಣ್ ಜಾದವ್ ಮರಣದಂಡನೆ ಶಿಕ್ಷೆಯನ್ನು ಮರುಪರಿಶೀಲಿಸುವಂತೆ ವಿಶ್ವಸಂಸ್ಥೆ ಮೊರೆಹೋಗುವ ಸಾಧ್ಯತೆ ಇದೆ.
ಇನ್ನು ಕಾಶ್ಮೀರದ ಪುಲ್ವಾಮಾ ಉಗ್ರ ದಾಳಿಯ ಬೆನ್ನಲ್ಲೇ ಕುಲಭೂಷಣ್ ಪ್ರಕರಣದ ವಿಚಾರಣೆ ನಡೆಯುತ್ತಿರುವುದು ಎರಡು ದೇಶಗಳ ನಡುವೆ ಮತ್ತಷ್ಟು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.