ಪೆಂಗ್ಯಾಂಗ್(ಉತ್ತರ ಕೊರಿಯಾ):ಆಹಾರದ ಅಭಾವ ಉತ್ತರ ಕೊರಿಯಾವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ಸಮಸ್ಯೆಯಿಂದ ಹೊರಬರಲು ಸರ್ವಾಧಿಕಾರಿ ಕಿಮ್ ಸರ್ಕಾರ ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ಅದೇ ಪ್ರಯತ್ನದ ಭಾಗವಾಗಿ ಬೃಹತ್ ಗ್ರೀನ್ ಹೌಸ್ ಫಾರ್ಮ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಉತ್ತರ ಕೊರಿಯಾದ ಸೌತ್ ಹ್ಯಾಮ್ಗ್ಯಾಂಗ್ ಪ್ರಾಂತ್ಯದ ಹಮ್ಜು ಕೌಂಟಿಯಲ್ಲಿ ರಿಯಾನ್ಫೋ ಗ್ರೀನ್‌ಹೌಸ್ ಫಾರ್ಮ್ ನಿರ್ಮಾಣ ಮಾಡುವ ಕಾಮಗಾರಿಯನ್ನು ಕಿಮ್ ಜಾಂಗ್ ಉನ್ ಉದ್ಘಾಟಿಸಿದ್ದಾರೆ. ಈ ಉದ್ಘಾಟನಾ ಸಮಾರಂಭದಲ್ಲಿ ಭಾರಿ ಜನಸಮೂಹ ನೆರೆದಿತ್ತು.
ಈ ಫಾರ್ಮ್ 250 ಎಕರೆ ವಿಸ್ತೀರ್ಣ ಹೊಂದಿದ್ದು, ಕಾಮಗಾರಿ ಪೂರ್ಣಗೊಳ್ಳಲು ಎಂಟು ತಿಂಗಳು ಬೇಕಾಗುತ್ತದೆ. ಕೃಷಿಯ ಅಧುನೀಕರಣಕ್ಕೆ ಗ್ರೀನ್ ಹೌಸ್ ಅಗತ್ಯವಿದೆ ಎಂದು ಕಿಮ್ ಹೇಳಿದ್ದು, ಈ ಸಮಾರಂಭದಲ್ಲಿ ಪಟಾಕಿಗಳನ್ನು ಸಿಡಿಸಿ ಮತ್ತು ಟ್ರ್ಯಾಕ್ಟರ್ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.