ಕರಾಚಿ:ಕಾಶ್ಮೀರ ವಿಚಾರವಾಗಿ ಭಾರತ-ಪಾಕ್ ನಡುವೆ ಈ ಹಿಂದಿನಿಂದಲೂ ವಾದ-ವಿವಾದ ನಡೆಯುತ್ತಲೇ ಇದೆ. ಇದರ ಮಧ್ಯೆ ಅಲ್ಲಿನ ಮಾಜಿ ಅಧ್ಯಕ್ಷ ಹಾಗೂ ಮಿಲಿಟರಿ ಸರ್ವಾಧಿಕಾರಿ ಎಂದು ಹೆಸರು ಪಡೆದುಕೊಂಡಿದ್ದ ಪರ್ವೇಜ್ ಮುಷರಫ್ ಇದೀಗ ಮತ್ತೊಂದು ವಿವಾದಿತ ಹೇಳಿಕೆ ನೀಡಿ ರಾಜಕೀಯಕ್ಕೆ ಮರಳಿದ್ದಾರೆ.
ಕಾಶ್ಮೀರ ಪಾಕಿಸ್ತಾನದ ರಕ್ತದಲ್ಲಿದೆ: ವಿವಾದಿತ ಹೇಳಿಕೆ ನೀಡಿ ರಾಜಕೀಯಕ್ಕೆ ಮರಳಿದ ಮುಷರಫ್! - ಪರ್ವೇಜ್ ಮುಷರಫ್
ಸರ್ವಾಧಿಕಾರಿ ಆಡಳಿತದಿಂದಲೇ ಪಾಕ್ನಲ್ಲಿದ್ದ ಮಾಜಿ ಪ್ರಧಾನಿ ಪರ್ವೇಜ್ ಮುಷರಫ್ ಸದ್ಯ ಕಾಶ್ಮೀರ ವಿಚಾರದಲ್ಲಿ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ.
ಕಾಶ್ಮೀರ ಪಾಕಿಸ್ತಾನದ ರಾಷ್ಟ್ರ ಹಾಗೂ ದೇಶದ ರಕ್ತದಲ್ಲಿದೆ. ಈ ವಿಷಯದಲ್ಲಿ ಪಾಕ್ ಸೈನಿಕರು ಅಲ್ಲಿನ ಜನರ ಪರವಾಗಿ ನಿಲ್ಲುತ್ತಾರೆ ಎಂದಿದ್ದಾರೆ. ಸದ್ಯ ದುಬೈನಲ್ಲಿ ವಾಸವಾಗಿರುವ ಮುಷರಫ್, ಕಾರ್ಗಿಲ್ ಯುದ್ಧದ ಬಗ್ಗೆ ಹೇಳಿದ್ದಾರೆ. ಭಾರತವು ಇಸ್ಲಾಮಾಬಾದ್ ಒಪ್ಪಂದದ ಹೊರತಾಗಿ ನಮಗೆ ಮೇಲಿಂದ ಮೇಲೆ ಬೆದರಿಕೆ ಹಾಕುತ್ತಿದೆ ಎಂದು ದೂರಿದ್ದಾರೆ.
ಭಾರತ ಕಾರ್ಗಿಲ್ ಯುದ್ಧ ಮರೆತಿದೆ ಎಂದಿರುವ ಅವರು, 1999ರಲ್ಲಿನ ಸಂಘರ್ಷ ಕೊನೆಗೊಳಿಸಲು ಅದು ಅಮೆರಿಕ ಅಧ್ಯಕ್ಷರ ಸಹಾಯ ಪಡೆಯಬೇಕಾಗಿತ್ತು ಎಂದು 76 ವರ್ಷದ ಆಲ್ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎಪಿಎಂಎಲ್) ಅಧ್ಯಕ್ಷ ಮುಷರಫ್ ಹೇಳಿದ್ದಾರೆ. ಸದ್ಯ ಎಪಿಎಂಎಲ್ ಸ್ಥಾಪನೆ ದಿನದ ಅಂಗವಾಗಿ ದುಬೈನಿಂದಲೇ ಮಾತನಾಡಿದ ಅವರು, ಅನಾರೋಗ್ಯದ ಕಾರಣ ನಾನು ರಾಜಕೀಯದಿಂದ ದೂರ ಉಳಿದಿರುವೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್ 370 ರದ್ದುಗೊಳಿಸಿದ ನಂತರ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹಾಳಾಗಿದೆ ಎಂದಿದ್ದಾರೆ.
ನಾವು ಮೇಲಿಂದ ಮೇಲೆ ಶಾಂತಿ ಒಪ್ಪಂದಕ್ಕೆ ಮುಂದಾಗುತ್ತಿದ್ದೇವೆ ಎಂದ ಮಾತ್ರಕ್ಕೆ ಅದು ನಮ್ಮ ದೌರ್ಬಲ್ಯ ಎಂದು ಭಾರತ ಅಂದುಕೊಳ್ಳಬಾರದು. ಅವರಿಗೆ ತಿರುಗೇಟು ನೀಡುವ ಸಾಮರ್ಥ್ಯ ನಮ್ಮಲ್ಲಿದೆ ಎಂದಿದ್ದಾರೆ.
1999ರಿಂದ 2008ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಮುಷರಫ್, ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ ಮತ್ತು ರೆಡ್ ಮಸೀದಿ ಪಾದ್ರಿ ಹತ್ಯೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಮಾರ್ಚ್ 2016ರಿಂದ ದುಬೈನಲ್ಲಿ ವಾಸಿಸುತ್ತಿದ್ದಾರೆ.