ಕಾಬೂಲ್(ಅಫ್ಘಾನಿಸ್ತಾನ):ಕೆಲವು ದಿನಗಳ ಹಿಂದೆ ಅತ್ಯಂತ ಕ್ರೂರ ಜಾಗತಿಕ ವಿದ್ಯಮಾನಗಳಿಗೆ ಸಾಕ್ಷಿಯಾಗಿದ್ದ ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಶೀಘ್ರದಲ್ಲೇ ತನ್ನ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಪ್ರಾರಂಭಿಸಲಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಅಬ್ದುಲ್ ಹದಿ ಹಮದಾನಿ ತಿಳಿಸಿದ್ದಾರೆ.
ದೇಶದೊಳಗಿನ ವಿಮಾನಯಾನ ಸೇವೆ ಈಗಾಗಲೇ ಆರಂಭಗೊಂಡಿದೆ. ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆಗಳ ಪರಿಶೀಲನೆ ಮತ್ತು ಪರಿಹಾರ ಕಾರ್ಯ ನಡೆಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರವಾಗಿ ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭವಾಗಲಿದೆ ಎಂದು ಅಬ್ದುಲ್ ಹದಿ ಹಮದಾನಿ ಹೇಳಿರುವುದನ್ನು ಕ್ಸಿನ್ಹುವಾ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ. ಹಮದಾನಿ ಪ್ರಕಾರ, ಆಗಸ್ಟ್ 31ರಂದು ಅಮೆರಿಕ ಪಡೆಗಳು ಹೊರಡುವ ವೇಳೆ ಸ್ವಲ್ಪ ಮಟ್ಟಿಗೆ ವಿಮಾನ ನಿಲ್ದಾಣಕ್ಕೆ ಹಾನಿಯಾಗಿತ್ತು.
ಈಗಾಗಲೇ ಹಲವು ರಾಷ್ಟ್ರಗಳು ಆಫ್ಘನ್ಗೆ ಮಾನವೀಯ ನೆರವು ನೀಡುತ್ತಿವೆ. ಕತಾರ್, ಬಹರೈನ್, ಯುನೈಟೆಡ್ ಅರಬ್ ಎಮಿರೇಟ್ಸ್, ಉಜ್ಬೇಕಿಸ್ತಾನ್, ಕಜಿಕಿಸ್ತಾನ್ ಮತ್ತು ಪಾಕಿಸ್ತಾನದಿಂದ ವಿಮಾನಗಳ ಮೂಲಕ ನೆರವು ಸಿಕ್ಕಿದೆ. ಮುಂದಿನ ದಿನಗಳಲ್ಲಿ ರಷ್ಯಾ ಮತ್ತು ಟರ್ಕಿಯಿಂದ ಇದೇ ವಿಮಾನ ನಿಲ್ದಾಣಕ್ಕೆ ನೆರವು ಹರಿದು ಬರಲಿವೆ.
ಈಗಾಗಲೇ ವಿಮಾನ ನಿಲ್ದಾಣದ ನೌಕರರು, ಭದ್ರತಾ ಸಿಬ್ಬಂದಿ, ಮಹಿಳಾ ಸಿಬ್ಬಂದಿ ಕೆಲಸಕ್ಕೆ ಮರಳಿದ್ದಾರೆ. ವಿಮಾನ ನಿಲ್ದಾಣ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಕೆಲವರು ಕೆಲಸಕ್ಕೆ ಮರಳಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ. ನಮ್ಮನ್ನು ಕೆಲಸ ಪುನಾರಂಭಿಸಲು ಕೇಳಿದ್ದಕ್ಕೆ ಸಂತೋಷವಾಗುತ್ತಿದೆ. ಇಂದಿನಿಂದ ಸರ್ಕಾರ ನಮಗೆ ಸಂಬಳ ನೀಡಬೇಕೆಂದು ಮತ್ತೊಬ್ಬ ಸಿಬ್ಬಂದಿ ಹೇಳಿದ್ದಾರೆ.
ಇದನ್ನೂ ಓದಿ:ಅಮೆರಿಕದಲ್ಲಿ ಕೋವಿಡ್ ಎಫೆಕ್ಟ್: ದೊಡ್ಡಣ್ಣನ ಖಜಾನೆಯಲ್ಲಿ ಆದಾಯದ ಕೊರತೆ!