ನವದೆಹಲಿ: ಏಷ್ಯಾ ಪೆಸಿಫಿಕ್ ಭಾಗದಲ್ಲಿ ಮಾತ್ರವಲ್ಲದೇ, ಜಗತ್ತಿನಾದ್ಯಂತ ತನ್ನ ಪ್ರಾಬಲ್ಯವನ್ನು ಸಾಧಿಸಬೇಕೆಂಬ ಉದ್ದೇಶದಿಂದ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿರುವ ಚೀನಾಗೆ ಕೊರೊನಾ ಸೃಷ್ಟಿ ಬಳಿಕ ಮತ್ತೊಂದು ಕುಖ್ಯಾತಿ ಅಂಟಿಕೊಂಡಿದೆ. ಚೀನಾದ ಬಹುತೇಕ ನಗರಗಳು ಹಸಿರು ಮನೆ ಅನಿಲ ಹೆಚ್ಚಾಗಿ ಉತ್ಪಾದಿಸಿ ಪರಿಸರ ನಾಶಕ್ಕೆ ಕಾರಣವಾಗಿವೆ ಎನ್ನಲಾಗಿದೆ.
ಹಸಿರು ಮನೆ ಅನಿಲವನ್ನು ಹೊರಹಾಕುವ ಜಗತ್ತಿನ 53 ದೇಶಗಳ 167 ನಗರಗಳು ಪಟ್ಟಿ ಮಾಡಲಾಗಿದ್ದು, ಒಟ್ಟು ಹಸಿರು ಮನೆ ಅನಿಲ ಪ್ರಮಾಣದ ಅರ್ಧದಷ್ಟನ್ನು ಕೇವಲ 25 ನಗರಗಳು ಹೊರಹಾಕುತ್ತವೆ. ಆ 25 ನಗರಗಳಲ್ಲಿ ಬಹುತೇಕ ನಗರಗಳು ಚೀನಾದಲ್ಲಿವೆ ಎಂದು ತಿಳಿದುಬಂದಿದೆ.
ಫ್ರಾಂಟಿಯರ್ ಎಂಬ ಜರ್ನಲ್ನಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದ್ದು, ವಿಶ್ವದ ಶ್ರೀಮಂತ ನಗರಗಳಲ್ಲಿ ಅಬಿವೃದ್ಧಿಶೀಲ ರಾಷ್ಟ್ರಗಳಿಗಿಂತ ಹೆಚ್ಚು ಹಸಿರು ಮನೆ ಅನಿಲ ಉತ್ಪಾದನೆಯಾಗುತ್ತದೆ ಸಂಶೋಧನೆಯಲ್ಲಿ ಬಹಿರಂಗವಾಗಿದೆ.
ಮಾಸ್ಕೋ ಮತ್ತು ಟೋಕಿಯೊ ಜೊತೆಗೆ 23 ಚೀನಾದ ನಗರಗಳಲ್ಲಿ ಉತ್ಪಾದನೆಯಾಗುವ ಹಸಿರು ಮನೆ ಅನಿಲ ಜಗತ್ತಿನಲ್ಲಿ ಉತ್ಪಾದನೆಯಾಗುವ ಒಟ್ಟು ಹಸಿರು ಮನೆ ಅನಿಲದಲ್ಲಿ ಶೇಕಡಾ 52 ರಷ್ಟಿದೆ ಎಂದು ಸಂಶೋಧನೆ ಹೇಳಿದೆ.
ಈ ಸಂಶೋಧನೆ ಚೀನಾ, ಭಾರತ, ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ನಲ್ಲಿ ಬರುವ ನಗರಗಳನ್ನು ಹೆಚ್ಚಾಗಿ ಗಣನೆಗೆ ತೆಗೆದುಕೊಂಡಿತ್ತು. ಏಕೆಂದರೆ ಈ ದೇಶಗಳಲ್ಲೇ ಅತಿ ಮಾಲಿನ್ಯ ಉಂಟುಮಾಡುವ ಮತ್ತು ಕೈಗಾರಿಕೆಗಳು ಹೆಚ್ಚಿರುವ ಕಾರಣದಿಂದ ಹಸಿರು ಮನೆ ಅನಿಲ ಹೆಚ್ಚಳಕ್ಕೆ ಸಾಕಷ್ಟು ಕೊಡುಗೆ ನೀಡುತ್ತವೆ ಎನ್ನಲಾಗಿತ್ತು.
ಹಸಿರು ಮನೆ ಅನಿಲಗಳಉತ್ಪಾದನೆ ಪ್ರಮಾಣದಲ್ಲಿ 167 ನಗರಗಳಲ್ಲಿ ಮೊದಲ ಆರು ಸ್ಥಾನ ಚೀನಾ ಹೊಂದಿದೆ. ಚೀನಾದ ಹಂಡನ್, ಶಾಂಘೈ, ಶೌಜು ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದಿದೆ. ಏಳನೇ ಸ್ಥಾನದಲ್ಲಿ ರಷ್ಯಾದ ಮಾಸ್ಕೋ, 17ನೇ ಸ್ಥಾನದಲ್ಲಿ ಜಪಾನ್ ಟೋಕಿಯೋ ಇದೆ.