ಟೋಕಿಯೊ :ರಾಷ್ಟ್ರದಾದ್ಯಂತಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆ, ಟೋಕಿಯೊ ಮತ್ತು ಹತ್ತಿರದ ಮೂರು ಪ್ರದೇಶಗಳಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಹೇರಲು ಜಪಾನ್ ಸಿದ್ಧತೆ ನಡೆಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಪಾನಿನ ಮುಖ್ಯ ಸಂಪುಟ ಕಾರ್ಯದರ್ಶಿ ಕಟ್ಸುನೊಬು ಕ್ಯಾಟೊ, ಜನರನ್ನು ಕಾಡುತ್ತಿರುವ ವೈರಸ್ನ್ನು ಒದ್ದೋಡಿಸಲು ಪರಿಣಾಮಕಾರಿ ಮತ್ತು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಯೋಚಿಸಲಾಗಿದೆ. ತುರ್ತು ಪರಿಸ್ಥಿತಿ ಸಮಯದಲ್ಲಿ ಜನರಿಗೆ ದಂಡ ವಿಧಿಸುವುದಿಲ್ಲ. ಆದರೆ, ಸಾರ್ವಜನಿಕರು ಆದಷ್ಟು ಮನೆಯಿಂದಲೇ ಕೆಲಸ ಮಾಡಬೇಕು, ಹೊರಗಡೆ ಜಾಸ್ತಿ ಓಡಾಡಬಾರದು, ಟೇಕ್ ಅವೇ ವ್ಯವಸ್ಥೆಗೆ ಆದ್ಯತೆ ಕೊಡಬೇಕು ಎಂದು ಹೇಳಿದ್ದಾರೆ.
ಟೋಕಿಯೊ ಗವರ್ನರ್ ಯುರಿಕೊ ಕೊಯಿಕೆ ಮತ್ತು ನೆರೆಯ ಸೈತಮಾ, ಚಿಬಾ ಮತ್ತು ಕನಗಾವಾ ಪ್ರಾಂತಗಳ ಮುಖ್ಯಸ್ಥರು ತುರ್ತು ಪರಿಸ್ಥಿತಿ ಹೇರಿಕೆ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ಧರು. ಈ ಕುರಿತು ಪ್ರತಿಕ್ರಿಯಿಸುವುದಾಗಿ ಪ್ರಧಾನಿ ಯೋಶಿಹಿದೆ ಸುಗಾ ಭರವಸೆ ನೀಡಿದ್ದಾರೆ.
ಓದಿ : ಹೊಸ ಅಭಿವೃದ್ಧಿ ಗುರಿಗಳನ್ನು ರೂಪಿಸಲು ಹೊಸ ಕಾಂಗ್ರೆಸ್ ತೆರೆದ ಉ.ಕೊರಿಯಾ
ಜಪಾನ್‌ನಲ್ಲಿ ಈಗಾಗಲೇ ರಾತ್ರಿ 8 ಗಂಟೆಗೆ ರೆಸ್ಟೋರೆಂಟ್‌ಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಶಾಲೆ, ಫಿಟ್‌ನೆಸ್ ಕ್ಲಬ್ ಮತ್ತು ಚಿತ್ರಮಂದಿರಗಳನ್ನು ತೆರೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಜಪಾನ್ ಇದೇ ರೀತಿಯ ತುರ್ತು ಪರಿಸ್ಥಿತಿಯನ್ನು ಎದುರಿಸಿತ್ತು, ಬಳಿಕ ಸೋಂಕು ಹರಡುವಿಕೆ ನಿಯಂತ್ರಿಸಲು ಇದನ್ನು ರಾಷ್ಟ್ರವ್ಯಾಪಿ ವಿಸ್ತರಿಸಿತ್ತು.
ಸದ್ಯ, ಜಪಾನ್‌ನಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ಪ್ರತಿದಿನ 3 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಟೋಕಿಯೋ ನಗರದಲ್ಲಿ ಮಂಗಳವಾರ 1,278 ಹೊಸ ಕೋವಿಡ್ ಪ್ರಕರಣ ವರದಿಯಾಗಿವೆ. ದೇಶದಾದ್ಯಂತ ಸುಮಾರು 2 ಲಕ್ಷದ 40 ಸಾವಿರ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 3,600 ಕ್ಕೂ ಹೆಚ್ಚು ಜನರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.