ಇಸ್ಲಮಾಬಾದ್: ಅನಾರೋಗ್ಯದಿಂದ ಬಳಲುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ಗೆ ಇಸ್ಲಮಾಬಾದ್ ಹೈಕೋರ್ಟ್ ವೈದ್ಯಕೀಯ ಆಧಾರದ ಮೇಲೆ 8 ವಾರಗಳ ಕಾಲಾವಧಿಯ ಜಾಮೀನು ಮಂಜೂರು ಮಾಡಿದೆ.
ನವಾಜ್ ಷರೀಫ್ ಅಲ್-ಅಜಿಜಿಯಾ ಪ್ರಕರಣದಲ್ಲಿ ಅಪರಾಧಿಯಾಗಿದ್ದು ಏಳು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಇದಲ್ಲದೇ ಚೌಧರಿ ಶುಗರ್ ಮಿಲ್ಸ್ ವಿಷಯದಲ್ಲಿ ಅವರನ್ನು ಎನ್ಎಬಿ ಕಸ್ಟಡಿಯಲ್ಲಿಡಲಾಗಿದೆ.
ಷರೀಫ್ ಅವರ ದೇಹದಲ್ಲಿ ಪ್ಲೇಟ್ಲೇಟ್ಸ್ ರಕ್ತ ಕಣಗಳ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಒಂದು ವಾರದ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಹಿಂದೆ ಸಣ್ಣ ಪ್ರಮಾಣದಲ್ಲಿ ಹೃದಯಾಘಾತವಾಗಿದ್ದ ಸಂದರ್ಭದಲ್ಲಿ ಷರೀಫ್ಗೆ ಸರಿಯಾಗಿ ಚಿಕಿತ್ಸೆ ನೀಡದೇ ಇರುವುದರಿಂದ ಪ್ಲೇಟ್ಲೆಟ್ಸ್ ಕಡಿಮೆಯಾಗಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.
ಪ್ಲೇಟ್ಲೆಟ್ಸ್ ಇಳಿಕೆಯಾಗಿರುವ ಪ್ರಮಾಣ ನೈಜ ಸ್ಥಿತಿಗೆ ತಲುಪುವವರೆಗೂ ಅವರನ್ನು ಡಿಸ್ಚಾರ್ಜ್ ಮಾಡಲು ಸಾಧ್ಯವಿಲ್ಲ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಆಧಾರದ ಮೇಲೆ ಇಸ್ಲಮಾಬಾದ್ ಹೈಕೋರ್ಟ್ 8 ವಾರಗಳ ಜಾಮೀನು ಮಂಜೂರು ಮಾಡಿದೆ.