ಟೆಹರಾನ್ : ಇರಾನ್‌ನ ಗನ್ ಬೋಟ್ಗಳನ್ನು ಹೊಡೆದುರುಳಿಸಲು ಆದೇಶಿಸಿದ್ದೇನೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಬೆದರಿಕೆಗೆ ತಿರುಗೇಟು ನೀಡಿರುವ ಇರಾನ್, ನಮ್ಮ ಭೂಪ್ರದೇಶದ ಭದ್ರತೆಗೆ ಅಪಾಯ ಎದುರಾದರೆ ತಕ್ಕ ಉತ್ತರ ನೀಡಲಿದ್ದೇವೆ ಎಂದಿದೆ.
ಇರಾನ್‌ನ ದಕ್ಷಿಣ ಭಾಗದ ಅಂತಾರಾಷ್ಟ್ರೀಯ ಜಲ ರೇಖೆಯ ಬಳಿಯಿರುವ ನಮ್ಮ ಹಡಗುಗಳಿಗೆ ಕಿರುಕುಳ ನೀಡಿದರೆ, ಇರಾನ್‌ನ ಗನ್‌ಬೋಟ್‌ಗಳನ್ನು ಹೊಡೆದುರುಳಿಸಿ ನಾಶಪಡಿಸುವಂತೆ ನೌಕಾಪಡೆಗೆ ಆದೇಶಿಸಿದ್ದೇನೆ ಎಂದು ಟ್ರಂಪ್ ಬುಧವಾರ ಹೇಳಿದ್ದರು.
ಟ್ರಂಪ್ ಹೇಳಿಕೆಗೆ ಮುಂಚಿತವಾಗಿ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್ (ಐಆರ್‌ಜಿಸಿ) ಯ 11 ಮಿಲಿಟರಿ ಹಡಗುಗಳು ಯುಎಸ್ ನೇವಿ ಮತ್ತು ಕೋಸ್ಟ್ ಗಾರ್ಡ್ ಬಳಿ ಅಪಾಯಕಾರಿ ಮತ್ತು ಪ್ರಚೋದನಕಾರಿ ಚಟುವಟಿಕೆಗಳನ್ನು ನಡೆಸುತ್ತಿವೆ ಎಂದು ಯುಎಸ್ ನೌಕಾಪಡೆ ಹೇಳಿತ್ತು.
ಟ್ರಂಪ್‌ರ ಬೆದರಿಕೆಗೆ ಪ್ರತಿಕ್ರಿಯಿಸಿದ ಐಆರ್‌ಜಿಸಿಯ ಮುಖ್ಯ ಕಮಾಂಡರ್ ಹೊಸೆನ್ ಸಲಾಮಿ ಅಮೆರಿಕದ ಅಪಾಯಕಾರಿ ನಡವಳಿಕೆಯು ಐಆರ್‌ಜಿಸಿ ನೌಕಾಪಡೆಯ ಹಡಗುಗಳು ಮತ್ತು ಅಮೆರಿಕದ ಹಡಗುಗಳು ಮುಖಾಮುಖಿಯಾಗಲು ಕಾರಣವಾಗಿದೆ. ನಮ್ಮ ರಾಷ್ಟ್ರೀಯ ಭದ್ರತೆ, ಕಡಲ ಗಡಿಗಳು, ಕಡಲ ಹಿತಾಸಕ್ತಿ, ಮತ್ತು ಸಮುದ್ರದಲ್ಲಿ ನಮ್ಮ ಪಡೆಗಳ ಸುರಕ್ಷತೆಯನ್ನು ಕಾಪಾಡುವಲ್ಲಿ ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ. ನಮ್ಮ ವಿರುದ್ಧ ಏನಾದರೂ ಷಡ್ಯಂತ್ರ ನಡೆಸಿದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವೇದ್ ಜರೀಫ್, "ಯುಎಸ್ ಪಡೆಗಳಿಗೆ ತಮ್ಮ ನಿಗದಿತ ಸ್ಥಳ ಬಿಟ್ಟು 7 ಸಾವಿರ ಮೈಲಿ ದೂರದಲ್ಲಿ ಏನು ಕೆಲಸ. ನಮ್ಮ ನೌಕಾ ಪಡೆ ನಮ್ಮದೇ ನಿಗದಿತ ಪ್ರದೇಶದಲ್ಲಿದೆ ಎಂದು ತಿರುಗೇಟು ನೀಡಿದ್ದಾರೆ.