ವಾಷಿಂಗ್ಟನ್: ಅಫ್ಘಾನಿಸ್ತಾನವನ್ನು ಬಲಪ್ರಯೋಗದ ಮೂಲಕ ಆಕ್ರಮಿಸಿರುವ ತಾಲಿಬಾನಿಗಳಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ದೊಡ್ಡ ಪೆಟ್ಟು ಕೊಟ್ಟಿದೆ. ಉಗ್ರ ಸಂಘಟನೆಗೆ ಸಂಪನ್ಮೂಲಗಳನ್ನು ತೆಗೆದುಕೊಳ್ಳುವ ಹಕ್ಕನ್ನು ನಿಲ್ಲಿಸುತ್ತಿರುವುದಾಗಿ ಅದು ಘೋಷಿಸಿದೆ.
ಈಗಾಗಲೇ ಮಂಜೂರು ಮಾಡಿದ ಹಣವನ್ನು ತೆಗೆದುಕೊಳ್ಳಲು ಕೂಡಾ ಅನುಮತಿ ನಿರಾಕರಿಸಿರುವ ಮಾಹಿತಿ ಬಹಿರಂಗಪಡಿಸಿದೆ. ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಫ್ಘಾನಿಸ್ತಾನಕ್ಕೆ ನೀಡುತ್ತಿದ್ದ 950 ಕೋಟಿ ಡಾಲರ್ ನೆರವನ್ನು ಸ್ಥಗಿತಗೊಳಿಸಿದ್ದರು. ತಾಲಿಬಾನ್‌ಗಳ ಕೈಗೆ ಹಣಕಾಸು ಸಿಗುವುದನ್ನು ತಡೆಯಲು ಈ ನಿರ್ಬಂಧ ವಿಧಿಸಲಾಗಿತ್ತು.
ಅಮೆರಿಕದ ಹಣಕಾಸು ಕಾರ್ಯದರ್ಶಿ ಜಾನೆಟ್ ಯೆಲೆನ್ ಈ ವಿಚಾರವನ್ನು ದೃಢಪಡಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ತಿಳಿಸಿದೆ. ಅಮೆರಿಕದಲ್ಲಿ ಅಫ್ಘಾನ್ ಸರ್ಕಾರದ ಒಡೆತನದ ಕೇಂದ್ರೀಯ ಬ್ಯಾಂಕುಗಳ ಆಸ್ತಿಯನ್ನು ತಾಲಿಬಾನ್ ಸ್ವಾಧೀನಪಡಿಸಿಕೊಳ್ಳದಂತೆಯೂ ನಾವು ನೋಡಿಕೊಳ್ಳುತ್ತೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಾಗೂ ಶ್ವೇತಭವನದೊಂದಿಗೆ ವಿಸ್ತೃತವಾಗಿ ಸಮಾಲೋಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.