ಜಕಾರ್ತಾ (ಇಂಡೋನೇಷ್ಯಾ): ನಿನ್ನೆ ಪತನಗೊಂಡ ಶ್ರೀವಿಜಯ ಏರ್ ವಿಮಾನದ ಎರಡು ಬ್ಲ್ಯಾಕ್ ಬಾಕ್ಸ್ ಇರುವ ಸ್ಥಳವನ್ನು ಗುರುತಿಸಲಾಗಿದೆ ಎಂದು ಇಂಡೋನೇಷ್ಯಾ ಅಧಿಕಾರಿಗಳು ಹೇಳಿದ್ದಾರೆ.
ವಿಮಾನ ದುರಂತಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, "ಇಂಡೋನೇಷ್ಯಾದಲ್ಲಿ ನಡೆದ ದುರದೃಷ್ಟಕರ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಸಾಂತ್ವನಗಳು. ದುಃಖದ ಈ ಸಮಯದಲ್ಲಿ ಭಾರತ ಇಂಡೋನೇಷ್ಯಾ ಜೊತೆ ನಿಂತಿದೆ" ಎಂದು ಟ್ವೀಟ್ ಮಾಡಿದ್ದಾರೆ.
ನಿನ್ನೆ ಇಂಡೋನೇಷ್ಯಾದ ಜಕಾರ್ತಾದಿಂದ ಪಶ್ಚಿಮ ಕಾಲಿಮಂತನ್ ಪ್ರಾಂತ್ಯದ ಪೊಂಟಿಯಾನಕ್ ಕಡೆಗೆ ಹೊರಟಿದ್ದ 62 ಪ್ರಯಾಣಿಕರಿದ್ದ ಶ್ರೀವಿಜಯ ಏರ್ ವಿಮಾನ ಪತನಗೊಂಡು ಸಮುದ್ರಕ್ಕೆ ಅಪ್ಪಳಿಸಿತ್ತು.
ಸಮುದ್ರದಲ್ಲಿ ಇಂದು ಮನುಷ್ಯರ ದೇಹದ ಭಾಗಗಳು, ಬಟ್ಟೆಯ ತುಂಡುಗಳು ಹಾಗೂ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಸಮುದ್ರದಾಳದಲ್ಲಿ ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಏನಿದು ಬ್ಲ್ಯಾಕ್ ಬಾಕ್ಸ್?
ವಿಮಾನ ಪತನಕ್ಕೆ ಕಾರಣ ತಿಳಿಯಬೇಕೆಂದರೆ ಮೊದಲು ವಿಮಾನದಲ್ಲಿರುವ ಕಪ್ಪು ಪೆಟ್ಟಿಗೆ (ಬ್ಲ್ಯಾಕ್ ಬಾಕ್ಸ್) ಹುಡುಕುವುದು ಅತ್ಯವಶ್ಯವಾಗಿದೆ. ಬ್ಲ್ಯಾಕ್ ಬಾಕ್ಸ್ ಮೂಲಕ ದುರಂತಕ್ಕೂ ಮುನ್ನ ಪೈಲಟ್ ಹಾಗೂ ಕಂಟ್ರೋಲ್ ರೂಂ ಸಿಬ್ಬಂದಿ ನಡುವೆ ನಡೆದ ಸಂಭಾಷಣೆಯನ್ನು ಟ್ರೇಸ್ ಮಾಡಬಹುದಾಗಿದೆ.
ಕಪ್ಪು ಪೆಟ್ಟಿಗೆಯಲ್ಲಿ 'ಫ್ಲೈಟ್ ಡಾಟಾ ರೆಕಾರ್ಡರ್' ಹಾಗೂ 'ಡಿಜಿಟಲ್ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್' ಎಂಬ ಎರಡು ಸಾಧನಗಳಿರುತ್ತದೆ. ಫ್ಲೈಟ್ ಡಾಟಾ ರೆಕಾರ್ಡರ್ - ಇದು ವಿಮಾನದ ಮಾರ್ಗ, ವೇಗೋತ್ಕರ್ಷ, ಇಂಜಿನ್ನ ತಾಪಮಾನ, ಗಾಳಿಯ ವೇಗ, ವಿಮಾನವಿದ್ದ ಎತ್ತರ ಸೇರಿದಂತೆ ವಿಮಾನದ ಕುರಿತ ಇತರ ಡೇಟಾಗಳನ್ನು ನೀಡುತ್ತದೆ.
ಡಿಜಿಟಲ್ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್- ಇದು ಕಾಕ್‌ಪಿಟ್ (ಪೈಲಟ್ ಕುಳಿತಿರುವ ಸ್ಥಳ)ನೊಳಗೆ ನಡೆಸಿದ ಎಲ್ಲ ಸಂಭಾಷಣೆಗಳನ್ನೂ ದಾಖಲಿಸುತ್ತದೆ. ಅವಘಡ ನಡೆಯುವ ಸಂದರ್ಭ ಹಾಗೂ ಅದಕ್ಕೂ ಮೊದಲು ಪೈಲಟ್‌ಗಳು ಮಾತನಾಡಿರುವುದು ಇದರಲ್ಲಿ ರೆಕಾರ್ಡ್ ಆಗಿರುತ್ತದೆ. ಆಟೋಮೆಟಿಕ್ ಕಂಪ್ಯೂಟರ್ ಅನೌನ್ಸ್ಮೆಂಟ್ಗಳೂ ಈ ಚಿಪ್ನಲ್ಲಿ ರೆಕಾರ್ಡ್ ಆಗಿರುತ್ತದೆ.
ಹೀಗಾಗಿ ಈ ಕಪ್ಪು ಪೆಟ್ಟಿಗೆಯ ಮೂಲಕ ತಜ್ಞರು ಯಾವುದೇ ವಿಮಾನ ದುರಂತವಾದರೂ ಅದು ಹೇಗಾಯಿತೆಂದು ಪತ್ತೆ ಹಚ್ಚುತ್ತಾರೆ.