ಜಕಾರ್ತಾ: ಮ್ಯಾನ್ಮಾರ್ ದೇಶದಲ್ಲಿನ ಪ್ರಸ್ತುತ ಪರಿಸ್ಥಿತಿ ಕುರಿತು ಚರ್ಚಿಸಲು ವಿಶೇಷ ಸಭೆ ಆಯೋಜಿಸುವಂತೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ (ಆಸಿಯಾನ್ -ASEAN) ವನ್ನು ಇಂಡೋನೇಷ್ಯಾ ಹಾಗೂ ಮಲೇಷ್ಯಾ ರಾಷ್ಟ್ರಗಳು ಒತ್ತಾಯಿಸಿವೆ.
ಜಕಾರ್ತಾದಲ್ಲಿ ಮಾತುಕತೆ ನಡೆಸಿ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೊಡೊ ಹಾಗೂ ಮಲೇಷ್ಯಾ ಪ್ರಧಾನಿ ಮುಹಿದ್ದೀನ್ ಯಾಸಿನ್, ನಾವು ಮ್ಯಾನ್ಮಾರ್ ರಾಜಕೀಯ ಅಸ್ಥಿರತೆ ಸೇರಿದಂತೆ ಜಾಗತಿಕ ವಿಷಯಗಳ ಕುರಿತು ಚರ್ಚಿಸಿದ್ದೇವೆ. ಸೂಕ್ತ ಕಾನೂನುಗಳ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ. ಇದಕ್ಕಾಗಿ ಆಸಿಯಾನ್ ಮಧ್ಯ ಪ್ರವೇಶಿಸಿ, ವಿಶೇಷ ಸಭೆ ನಡೆಸಬೇಕಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಮ್ಯಾನ್ಮಾರ್ನಲ್ಲಿ ಶಸ್ತ್ರಸಜ್ಜಿತರಿಂದ ದಾಳಿ: ಪೊಲೀಸರು, ನಾಗರಿಕರು ಸೇರಿ 12 ಮಂದಿ ಬಲಿ
2020ರ ನವೆಂಬರ್ 8 ರಂದು ಹೊರಬಂದ ಸಂಸತ್ ಚುನಾವಣಾ ಫಲಿತಾಂಶ ಮ್ಯಾನ್ಮಾರ್ನಲ್ಲಿ ಬೆಂಕಿ ಹೊತ್ತಿಸಿದೆ. ಚುನಾವಣೆಯಲ್ಲಿ ಮಾಜಿ ಆಡಳಿತ ಪಕ್ಷವಾದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಶೇ.80 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ. ಅಂದಿನಿಂದ ಮ್ಯಾನ್ಮಾರ್ನಲ್ಲಿ ಸರ್ಕಾರ ಮತ್ತು ಮಿಲಿಟರಿ ಆಡಳಿತದ ನಡುವೆ ಸಂಘರ್ಷ ನಡೆಯುತ್ತಿದೆ.
ಮ್ಯಾನ್ಮಾರ್‌ನ ಆಡಳಿತಾರೂಢ ಪಕ್ಷದ ಕೌನ್ಸಿಲರ್ ಆಂಗ್ ಸಾನ್ ಸೂಕಿ ಸೇರಿದಂತೆ ಹಲವು ನಾಯಕರನ್ನು ಅಲ್ಲಿನ ಸೇನೆಯು ವಶಕ್ಕೆ ಪಡೆದು ಗೃಹಬಂಧನದಲ್ಲಿರಿಸಿದೆ. ಫೇಸ್ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಂಗೆ ನಿರ್ಬಂಧ ಹೇರಿದೆ. ಅಲ್ಲದೇ ದೇಶದಲ್ಲಿ ಒಂದು ವರ್ಷಗಳ ಕಾಲ ತುರ್ತು ಪರಿಸ್ಥಿತಿ ಕೂಡ ಘೋಷಣೆ ಮಾಡಲಾಗಿದೆ.
1967ರಲ್ಲಿ ಆಸಿಯಾನ್(ASEAN)ಸ್ಥಾಪನೆಯಾಗಿದ್ದು, ಬ್ರುನೈ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮ್ಯಾನ್ಮಾರ್, ಫಿಲಿಪೈನ್ಸ್, ಸಿಂಗಾಪುರ್, ಥೈಲ್ಯಾಂಡ್ ಮತ್ತು ವಿಯೆಟ್ನಾಂ-ಆಗ್ನೇಯ ಏಷ್ಯಾದ ಈ 10 ದೇಶಗಳನ್ನೊಳಗೊಂಡ ಪ್ರಾದೇಶಿಕ ಸಂಘಟನೆಯಾಗಿದೆ.