13ನೇ ಸುತ್ತಿನ ಭಾರತ - ಚೀನಾ ಸೇನಾ ಮಾತುಕತೆಗಳು ವಿಫಲವಾದ ನಂತರ ಭಾರತೀಯ ನೌಕಾಪಡೆ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ಜೊತೆಗೆ ಬಂಗಾಳ ಕೊಲ್ಲಿಯಲ್ಲಿ 'ಆಪರೇಷನ್ ಮಲಬಾರ್' ಸಮರಾಭ್ಯಾಸದ ಮೂಲಕ ಡ್ರ್ಯಾಗನ್ ದೇಶಕ್ಕೆ ಕಠಿಣ ಸಂದೇಶ ರವಾನಿಸಿದೆ.
ಇದೇ 11 ರಿಂದ 15ರವರೆಗೆ ನಡೆಯುತ್ತಿರುವ ಸಮರಾಭ್ಯಾಸದ ನಡುವೆಯೇ ಯುಎಸ್ ನೌಕಾಪಡೆಯ ಕಮಾಂಡರ್ ಅಡ್ಮಿರಲ್ ಮೈಕೆಲ್ ಗಿಲ್ಡೆ ದೆಹಲಿಗೆ ಆಗಮಿಸಿ ಭಾರತೀಯ ನೌಕಾಪಡೆಯ ಕಮಾಂಡರ್ ಅಡ್ಮಿರಲ್ ಕರಂಬೀರ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಸಾಮಾನ್ಯವಾಗಿ ಭಾರತ-ಚೀನಾ ಸೇನೆಯ ಉನ್ನತ ಮಟ್ಟದ ಮಾತುಕತೆಗಳು ಮುಕ್ತಾಯಗೊಂಡ ನಂತರ ಹೊರಡಿಸಿದ ಹೇಳಿಕೆಗಳು ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದತೆಯ ವಿಶ್ವಾಸವನ್ನು ವ್ಯಕ್ತಪಡಿಸಿವೆ. ಭಾರತದ ಅಧಿಕೃತ ಹೇಳಿಕೆಯ ಪ್ರಕಾರ, ಇತ್ತೀಚಿನ ಸಭೆಯ ನಂತರ, ಗಡಿ ಮಾತುಕತೆಯಲ್ಲಿ ಚೀನಾ ಮಿಲಿಟರಿ ತನ್ನ ನಿಲುವನ್ನು ಒಪ್ಪಲಿಲ್ಲ ಮತ್ತು ಪರಿಹಾರಕ್ಕಾಗಿ ಯಾವುದೇ ಪ್ರಸ್ತಾಪವನ್ನು ಮಂಡಿಸಲಿಲ್ಲ.
ಪರಸ್ಪರ ಆರೋಪ- ಪ್ರತ್ಯಾರೋಪ ಸಭೆ ವಿಫಲ
ಮತ್ತೊಂದೆಡೆ, ಚೀನಾ ಸೇನೆ ಕೂಡ ಭಾರತೀಯ ಸೇನೆಯು ಅವಾಸ್ತವಿಕ ಮತ್ತು ಅವಿವೇಕದ ಮನೋಭಾವವನ್ನು ಅಳವಡಿಸಿಕೊಂಡಿದೆ. ಇದರಿಂದಾಗಿ ಮಾತುಕತೆಗಳು ಮುಂದುವರಿಯಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದೆ. 13ನೇ ಸುತ್ತಿನ ಭಾರತ-ಚೀನಾ ಸಭೆ ವಿಫಲವಾದ ಮರುದಿನವೇ ಬಂಗಾಳ ಕೊಲ್ಲಿಯಲ್ಲಿ ಭಾರತ ಎರಡನೇ ಹಂತದ ಆಪರೇಷನ್ ಮಲಬಾರ್ ಸಮರಾಭ್ಯಾಸವನ್ನು ಕ್ವಾಡ್ ದೇಶಗಳೊಂದಿಗೆ ಆರಂಭಿಸಿತು. ಮೊದಲ ಹಂತದಲ್ಲಿ ಫಿಲಿಪೈನ್ ಸಮುದ್ರದಲ್ಲಿ ಆಗಸ್ಟ್ 26-29ರವರೆಗೆ ನಡೆದಿತ್ತು.