ಕಠ್ಮಂಡು(ನೇಪಾಳ): ಲಿಪುಲೆಖ್ ವಿಷಯದ ಬಗ್ಗೆ ನೇಪಾಳ ಬೇರೊಬ್ಬರ ಆಜ್ಞೆಯ ಮೇರೆಗೆ ವರ್ತಿಸುತ್ತಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾನೆ ಹೇಳಿಕೆ ನೀಡಿದ್ದು, ಇದು ನಮ್ಮ ರಾಷ್ಟ್ರಕ್ಕೆ ಮಾಡಿದ ಅವಮಾನ ಎಂದು ನೇಪಾಳ ರಕ್ಷಣಾ ಸಚಿವ ಈಶ್ವರ್ ಪೋಖ್ರೆಲ್ ಭಾರತದ ವಿರುದ್ಧ ಹರಿಹಾಯ್ದಿದ್ದಾರೆ.
ಭಾರತದೊಂದಿಗೆ ಗಡಿ ವಿವಾದದ ಮಧ್ಯೆಯೇ, ಲಿಪುಲೆಖ್, ಕಾಲಾಪಾನಿ ಮತ್ತು ಲಿಂಪಿಯಾಧುರ ಪ್ರದೇಶಗಳನ್ನು ನೇಪಾಳದ ವ್ಯಾಪ್ತಿಯೊಳಗೆ ಗುರುತಿಸಿದ ಹೊಸ ನಕ್ಷೆಗೆ ನೇಪಾಳದ ಸಚಿವ ಸಂಪುಟ ಅನುಮೋದನೆ ನೀಡಿದ ಬೆನ್ನಲ್ಲೇ, ಭಾರತೀಯ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾನೆ ನೇಪಾಳದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ನೇಪಾಳ ಬೇರೊಬ್ಬರ ಆಜ್ಞೆಯ ಮೇರೆಗೆ ವರ್ತಿಸುತ್ತಿದೆ ಹೊರತು ತನ್ನ ಸ್ವಂತಿಕೆಯಿಂದಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಈಶ್ವರ್ ಪೋಖ್ರೆಲ್, ಇದು ನಮ್ಮ ದೇಶಕ್ಕೆ ಹಾಗೂ ನೇಪಾಳಿಗರಿಗೆ ಮಾಡಿದ ಅವಮಾನವಾಗಿದ್ದು,ನಮ್ಮ ಸ್ವಾತಂತ್ರ್ಯವನ್ನು ಕಡೆಗಣಿಸಿದಂತಾಗಿದೆ ಎಂದು ಕಿಡಿ ಕಾರಿದ್ದಾರೆ.
ಇಂತಹ ಹೇಳಿಕೆಯಿಂದ ನೇಪಾಳದ ಇತಿಹಾಸ ಹಾಗೂ ನಮ್ಮ ದೇಶದ ಸಾಮಾಜಿಕ ಗುಣಲಕ್ಷಣಗಳು ಮತ್ತು ಸ್ವಾತಂತ್ರ್ಯವನ್ನು ಕಡೆಗಣಿಸುವ ಮೂಲಕ ಮಾಡಿದ ಅವಮಾನಕರ ಹೇಳಿಕೆಯಾಗಿದೆ. ಈ ಹೇಳಿಕೆಯಿಂದಾಗಿ ಭಾರತವನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಅರ್ಪಿಸುವ ನೇಪಾಳಿ ಗೂರ್ಖಾ ಸೇನಾ ಸಿಬ್ಬಂದಿಯ ಭಾವನೆಗಳಿಗೂ ಧಕ್ಕೆ ಉಂಟಾಗಿದೆ ಎಂದು ನೇಪಾಳದ ರಕ್ಷಣಾ ಸಚಿವರು ಮೇ 22 ರ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.