ಕಠ್ಮಂಡು: ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿಯನ್ನು ಭೇಟಿ ಮಾಡಿ, ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲುವತಾರ್‌ನಲ್ಲಿರುವ ಪಿಎಂ ಅಧಿಕೃತ ನಿವಾಸದಲ್ಲಿ ಈ ಸಭೆ ನಡೆಯಿತು ಎಂದು ನೇಪಾಳ ಸೇನೆಯ ಮೂಲಗಳು ತಿಳಿಸಿವೆ.
ಜನರಲ್ ನರವಣೆ ಮೂರು ದಿನಗಳ ನೇಪಾಳ ಪ್ರವಾಸ ಕೈಗೊಂಡಿದ್ದಾರೆ. ಭಾರತ-ನೇಪಾಳ ಬಾಂಧವ್ಯ ಸುಧಾರಣೆ ದೃಷ್ಟಿಯಿಂದ ಇದು ಮಹತ್ವದ್ದೆನಿಸಿದೆ. ಸೈನ್ಯದ ಮುಖ್ಯಸ್ಥರು ಕಠ್ಮಂಡುವಿನ ಹೊರವಲಯದಲ್ಲಿರುವ ಶಿವಪುರಿಯಲ್ಲಿನ ಆರ್ಮಿ ಕಮಾಂಡ್ ಮತ್ತು ಸ್ಟಾಫ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ವಿದ್ಯಾರ್ಥಿಗಳಿಗೆ ಅವರು ತಮ್ಮ ಅನುಭವವನ್ನು ಹಂಚಿಕೊಂಡರು.
ಗುರುವಾರ ರಾಷ್ಟ್ರಪತಿ ಭವನದಲ್ಲಿ ಅಧ್ಯಕ್ಷರಾದ ಬಿದ್ಯದೇವಿ ಭಂಡಾರಿ ಅವರಿಂದ ಸೇನಾ ಗೌರವ ಪದಕವನ್ನು ನರವಣೆ ಸ್ವೀಕರಿಸಿದರು. ಇದು ಎರಡು ಮಿಲಿಟರಿಗಳ ನಡುವಿನ ಸಂಬಂಧವನ್ನು ಬಲವಾಗಿಸುವುದರ ಜೊತೆಗೆ ದಶಕಗಳ ಹಳೆಯ ಸಂಪ್ರದಾಯವಾಗಿದೆ.