ಕಾಬೂಲ್ (ಅಫ್ಘಾನಿಸ್ತಾನ):ಅಫ್ಘಾನಿಸ್ತಾನ ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಫಲಿತಾಂಶಗಳ ಘೋಷಣೆಯನ್ನು ಭಾರತ ಸ್ವಾಗತಿಸಿದ್ದು, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಫ್ಘಾನ್ ಸರ್ಕಾರದೊಂದಿಗೆ ಕೆಲಸ ಮಾಡಲು ಬದ್ಧವಾಗಿದೆ ಎಂದು ಹೇಳಿದೆ.
ಸೆಪ್ಟೆಂಬರ್ 28 ರಂದು ಅಫ್ಘಾನಿಸ್ತಾನದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ನಿನ್ನೆ ಘೋಷಣೆ ಮಾಡಲಾಗಿದ್ದು, ಇದರಲ್ಲಿ ಅಶ್ರಫ್ ಘನಿ 50.64 ರಷ್ಟು ಮತಗಳಿಸಿ ಗೆಲುವು ಸಾಧಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ವಿದೇಶಾಂಗ ಇಲಾಖೆ, ಸೆಪ್ಟೆಂಬರ್ 28 ರಂದು ನಡೆದ ಅಫ್ಘಾನಿಸ್ತಾನದ ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಫಲಿತಾಂಶಗಳ ಪ್ರಕಟಣೆಯನ್ನು ನಾವು ಸ್ವಾಗತಿಸುತ್ತೇವೆ ಮತ್ತು ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಲು ಮತ್ತು ಬಲಪಡಿಸಲು ನಾಯಕರು ಮತ್ತು ಸಂಸ್ಥೆಗಳು ಪಟ್ಟ ಶ್ರಮವನ್ನು ಶ್ಲಾಘಿಸುತ್ತೇವೆ ಎಂದಿದೆ.
ಅಫ್ಘಾನ್ ನಾಯಕರು ಮತ್ತು ಇತರ ಪಾಲುದಾರರು ಪ್ರಜಾಪ್ರಭುತ್ವವನ್ನ ಮತ್ತಷ್ಟು ಬಲಪಡಿಸಲು ಮತ್ತು ದೇಶ ಎದುರಿಸುತ್ತಿರುವ ಭಯೋತ್ಪಾದನೆಯಂತ ಗಂಭೀರ ಸವಾಲುಗಳ ವಿರುದ್ಧ ಹೋರಾಡಲು ಒಟ್ಟಾಗಿ ಕೆಲಸ ಮಾಡುತ್ತಾರೆ ಎಂಬ ಭರವಸೆಯನ್ನು ಹೊಂದಿದ್ದೇವೆ ಎಂದಿದೆ. ಅಲ್ಲದೆ ಭಯೋತ್ಪಾದನೆ ವಿರುದ್ಧದ ಹೋರಾಟ ಮತ್ತು ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಅಫ್ಘಾನಿಸ್ತಾನ ಸರ್ಕಾರದೊಂದಿಗೆ ಕೆಲಸ ಮಾಡಲು ಭಾರತ ಬದ್ಧವಾಗಿದೆ ಎಂದು ತಿಳಿಸಿದೆ
ಸೆಪ್ಟೆಂಬರ್ 28 ರಂದು ನಡೆದ ಚುನಾವಣೆಯಲ್ಲಿ ಅಶ್ರಫ್ ಘನಿ 9,23,868 ಮತಗಳನ್ನು ಗಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಅಫ್ಘಾನಿಸ್ತಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಬ್ದುಲ್ಲಾ ಅಬ್ದುಲ್ಲಾ ಅವರು ಶೇಕಡಾ 39.52 ರಷ್ಟು ಮತ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.