ಬೀಜಿಂಗ್: ಚೀನಾದ ಮಹತ್ವಾಕಾಂಕ್ಷೆಯ 2ನೇ ಬೆಲ್ಟ್ ಅಂಡ್ ರೋಡ್ ಫೋರಂ ಸಮಾವೇಶವನ್ನು ಮತ್ತೊಮ್ಮೆ ಭಾರತ ಬಹಿಷ್ಕರಿಸಿದ್ದು, ಪ್ರಾದೇಶಿಕ ಸಮಗ್ರತೆ ಹಾಗೂ ಸಾರ್ವಭೌಮತೆ ಕಡೆಗಣಿಸುವ ಯಾವುದೇ ಸಮಾವೇಶದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದೆ.
ಈ ಹಿಂದೆ 2017ರಲ್ಲಿ ಪ್ರಥಮ ಬಿಆರ್ಎಫ್ ಸಮಾವೇಶವನ್ನು ಸಹ ಭಾತ ಬಹಿಷ್ಕರಿಸಿತ್ತು. ಪಾಕ್ ಆಕ್ರಮಿತ ಕಾಶ್ಮೀರದ ಮುಖಾಂತರ ಹಾದು ಹೋಗುವ ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆ ವಿರೋಧಿಸಿ ಭಾರತ ಈ ನಿರ್ಣಯ ತೆಗೆದುಕೊಂಡಿದೆ.
ಬಿಆರ್‌ಐ ಬಗ್ಗೆ ನಮ್ಮ ನಿಲುವಿನಲ್ಲಿ ಮುಚ್ಚಿಕೊಳ್ಳುವಂತಹದ್ದು ಏನೂ ಇಲ್ಲ. ಭಾರತದ ನಿರ್ಧಾರವನ್ನು ಸಂಬಂಧಿತ ಅಧಿಕಾರಿಗಳಿಗೆ ಸ್ಪಷ್ಟಪಡಿಸಲಾಗಿದೆ. ಸಂಪರ್ಕ ಬೆಳೆಯಬೇಕೆಂಬ ಜಾಗತಿಕ ಆಶಯಕ್ಕೆ ಭಾರತ ಮೊದಲಿಂದ ಬೆಂಬಲ ನೀಡಿಕೊಂಡು ಬರುತ್ತಿದೆ. ಅದು ನಮ್ಮ ಆರ್ಥಿಕ ಅಭಿವೃದ್ಧಿ ಮತ್ತು ರಾಜತಾಂತ್ರಿಕ ಉಪಕ್ರಮಗಳ ಅವಿಭಾಜ್ಯ ಅಂಗ. ವಲಯಗಳನ್ನು ಮೀರಿ ಹಲವು ರಾಷ್ಟ್ರಗಳ ಜೊತೆಗೆ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಇಂತಹ ಯೋಜನೆಗಳಲ್ಲಿ ಸಹಭಾಗಿತ್ವ ಸಾಧಿಸಿದ್ದೇವೆ ಎಂದು ಚೀನಾದಲ್ಲಿನ ಭಾರತೀಯ ರಾಯಭಾರಿ ವಿಕ್ರಮ್ ಮಿಸ್ರಿ ಸ್ಥಳೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.