ಕೊಲಂಬೋ/ನವದೆಹಲಿ:ದ್ವೀಪರಾಷ್ಟ್ರ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಗೆ ಸಿದ್ಧವಾಗುತ್ತಿದ್ದು, ನೆರೆ ರಾಷ್ಟ್ರ ಭಾರತ ಹಾಗೂ ಚೀನಾ ಈ ಚುನಾವಣೆಯನ್ನೇ ಎದುರು ನೋಡುತ್ತಿವೆ.
ನವೆಂಬರ್ 16ರಂದು ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ದಕ್ಷಿಣ ಏಷ್ಯಾದ ಪ್ರಬಲ ರಾಷ್ಟ್ರಗಳಾದ ಭಾರತ ಮತ್ತು ಚೀನಾ ತಮ್ಮ ಪ್ರಾಬಲ್ಯವನ್ನು ಏಷ್ಯಾದಲ್ಲಿ ಸ್ಥಾಪಿಸಲು ದ್ವೀಪರಾಷ್ಟ್ರ ಪಾತ್ರ ಮಹತ್ವದ್ದು ಎಂದು ನಂಬಿವೆ.
ಶ್ರೀಲಂಕಾ ಮತ್ತು ಭಾರತದ ಸಂಬಂಧದ ಬಗ್ಗೆ ಲಂಕಾ ಅಧ್ಯಕ್ಷರ ಸಲಹೆಗಾರ ಸಮನ್ ವೀರಸಿಂಘೆ ಈಟಿವಿ ಭಾರತದೊಂದಿಗೆ ಮಾತನಾಡಿದ್ದು, ಉಭಯ ದೇಶಗಳು ಸಾವಿರಾರು ವರ್ಷದ ಸ್ನೇಹ ಹೊಂದಿದ್ದು, ಇದು ಕೇವಲ ಮಿತ್ರತ್ವ ಅಲ್ಲ, ಅದಕ್ಕಿಂತಲೂ ಹೆಚ್ಚು ಎಂದಿದ್ದಾರೆ.
ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ ಬಗ್ಗೆ ಈಟಿವಿ ಭಾರತ ವರದಿ ಮುಂದುವರೆದು ಮಾತನಾಡಿದ ವೀರಸಿಂಘೆ, ಶ್ರೀಲಂಕಾ ವ್ಯಾಪಾರ-ವ್ಯವಹಾರ ವಿಚಾರದಲ್ಲಿ ಎಲ್ಲ ದೇಶಗಳೊಂದಿಗೆ ಮುಕ್ತವಾಗಿದೆ. ಭಾರತ ಸೇರಿದಂತೆ ಹಲವು ದೇಶಗಳು ಕೊಲಂಬೋದಲ್ಲಿ ಹಲವಾರು ಯೋಜನೆಗಳನ್ನು ಆರಂಭಿಸಿವೆ ಮತ್ತು ಭಾರತದ ಸಹಕಾರ ಉತ್ತಮವಾಗಿದೆ ಎಂದಿದ್ದಾರೆ.
ಭಾರತ-ಶ್ರೀಲಂಕಾ ನಡುವೆ ಉತ್ತಮ ಬಾಂಧವ್ಯವಿದೆ. ಸದ್ಯ ಚೀನಾ ಜೊತೆಗೆ ಲಂಕಾದ ಸಂಬಂಧ ವೃದ್ಧಿಸುತ್ತಿದ್ದು, ಈ ವಿಚಾರದಲ್ಲಿ ಭಾರತ ಯಾವುದೇ ಭಯ ಪಡಬೇಕಿಲ್ಲ ಎಂದು ವೀರಸಿಂಘೆ ಸ್ಪಷ್ಟನೆ ನೀಡಿದ್ದಾರೆ.
ಶ್ರೀಲಂಕಾ ಸದ್ಯ ಬೆಳೆಯುತ್ತಿರುವ ದೇಶಗಳ ಸಾಲಿನಲ್ಲಿದೆ. ಹೀಗಾಗಿ ಹೂಡಿಕೆ ವಿಚಾರದಲ್ಲಿ ಮುಕ್ತವಾಗಿದೆ. ಚೀನಾ ಸದ್ಯ ಶ್ರೀಲಂಕಾದಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಭಾರತ ಸಹ ಆರ್ಥಿಕ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡುವ ವಿಶ್ವಾಸವನ್ನು ವೀರಸಿಂಘೆ ವ್ಯಕ್ತಪಡಿಸಿದ್ದಾರೆ.