ಬೀಜಿಂಗ್:ಕೊರೊನಾ ವೈರಸ್ ಪ್ರಕರಣ ಸಂಬಂಧ ಹುಬೈ ಪ್ರಾಂತ್ಯದಲ್ಲಿರುವ ಭಾರತೀಯರು ಮತ್ತು ಅವರ ಸಂಬಂಧಿಕರು, ಹಾಗೂ ಬೀಜಿಂಗ್, ವುಹಾನ್ ಹಾಗೂ ಹುಬೈನಲ್ಲಿರುವ ಚೀನಾದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಬೀಜಿಂಗ್ನಲ್ಲಿರುವ ಭಾರತದ ರಾಯಭಾರಿ ಕಚೇರಿ ತಿಳಿಸಿದೆ.
ಕೊರೊನಾ ವೈರಸ್ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆ (WHO) ನೀಡಿದ ಸಲಹೆಗಳನ್ನೊಳಗೊಂಡಂತೆ ಚೀನಾದಲ್ಲಿ ಉಲ್ಭಣಿಸುತ್ತಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ವುಹಾನ್ನಲ್ಲಿರುವ ಭಾರತೀಯರಿಗೆ ಚೀನಾ ಅಧಿಕಾರಿಗಳಿಂದ ಆಹಾರ ಪೂರೈಕೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿರುವುದಾಗಿ ತಿಳಿಸಿರುವ ಭಾರತೀಯ ರಾಯಭಾರಿ ಕಚೇರಿ, ವೈರಸ್ ಸಂಬಂಧ ಕಚೇರಿಯನ್ನು ಸಂಪರ್ಕಿಸಲು +8618612083629 ಹಾಗೂ +8618612083629- ಸಂಖ್ಯೆಯ ಎರಡು ಸಹಾಯವಾಣಿಯನ್ನು ಆರಂಭಿಸಿದೆ.
ಈ ಮಾರಣಾಂತಿಕ ವೈರಸ್ ಡಿಸೆಂಬರ್ನಲ್ಲಿ ವುಹಾನ್ ನಗರದಲ್ಲಿ ಮೊದಲು ಪತ್ತೆಯಾಗಿದ್ದು, ಬಳಿಕ ಅಮೆರಿಕ ಹಾಗೂ ದಕ್ಷಿಣ ಕೊರಿಯಾ, ಜಪಾನ್, ತೈವಾನ್ ಮತ್ತು ಥಾಯ್ಲೆಂಡ್ ಸೇರಿದಂತೆ ಏಷ್ಯಾದ ಹಲವಾರು ನಗರಗಳಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಚೀನಾದಲ್ಲಿ ಭಾರತದ ಸುಮಾರು 700 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರು ಭಾರತಕ್ಕೆ ಬಂದರೆ ವೈರಸ್ ಹರಡುವ ಭೀತಿ ಎದುರಾಗಿದ್ದು, ಅಲ್ಲಿಯೇ ಉಳಿದಿದ್ದಾರೆ. ಆದಾಗ್ಯೂ ಕೆಲವರು ರಜಾ ದಿನಗಳಿರುವ ಕಾರಣ ತಮ್ಮ ಮನೆಗಳಿಗೆ ತೆರಳಿದ್ದಾರೆ.
ಕೊರೊನಾ ವೈರಸ್ ಹೀಗೆ ಏಕಾಏಕಿ ಚೀನಾದಿಂದ ವಿಶ್ವದ ವಿವಿಧ ಭಾಗಗಳಿಗೆ ಹರಡುತ್ತಿರುವುದರಿಂದ, ಏಷ್ಯಾದ ದೇಶಗಳಿಂದ ಭಾರತಕ್ಕೆ ಬರುವ ಜನರು ಕಡ್ಡಾಯವಾಗಿ ಭಾರತದ ವಿಮಾನ ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಪ್ರಕ್ರಿಯೆಯ ಮೂಲಕ ಸಾಗಬೇಕಾಗುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಗುರುವಾರ ತಿಳಿಸಿದ್ದಾರೆ.
ಈಗಾಗಲೇ ಚೀನಾದಲ್ಲಿ ಕೊರೊನಾ ವೈರಸ್ಗೆ 830 ಪ್ರಕರಣಗಳ ಪೈಕಿ ಈಗಾಗಲೇ 25 ಮಂದಿ ಬಲಿಯಾಗಿದ್ದು, ಇನ್ನು ಸೋಂಕು ಹರಡುವ ಸಾಧ್ಯತೆಯಿರುವುದರಿಂದ ಹುಬೈ ಪ್ರಾಂತ್ಯದ ಐದು ನಗರಗಳಲ್ಲಿ ಜನ ಹಾಗೂ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.