ಢಾಕಾ (ಬಾಂಗ್ಲಾದೇಶ):ಭಾರತ ಮತ್ತು ಚೀನಾ ನಡುವಿನ ಗಡಿ ಉದ್ವಿಗ್ನತೆಯು ರಾಜತಾಂತ್ರಿಕವಾಗಿ ಬಗೆಹರಿಯಲಿದೆ ಎಂದು ಭರವಸೆ ವ್ಯಕ್ತಪಡಿಸಿದ, ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್ ಮೊಮೆನ್ ಭಾರತ ತನ್ನ ದೇಶದ ಅತಿದೊಡ್ಡ ಮಿತ್ರ ರಾಷ್ಟ್ರವಾಗಿದೆ ಎಂದು ಹೇಳಿದ್ದಾರೆ.
"ಬಾಂಗ್ಲಾದೇಶವು ಶಾಂತಿಯ ಪ್ರವರ್ತಕ. ನಾವು ಯಾವಾಗಲೂ ನೆರೆಹೊರೆಯವರೊಂದಿಗೆ ಶಾಂತಿಯುತ ಸಹಬಾಳ್ವೆಯಿಂದ ಇರುತ್ತೇವೆ. ಪ್ರತಿಯೊಂದು ಸಮಸ್ಯೆ ಚರ್ಚಿಸುವ ಮೂಲಕ ನಾವು ಪರಿಹಾರ ಕಂಡುಕೊಳ್ಳುತ್ತೇವೆ. ಇಂಡೋ - ಬಾಂಗ್ಲಾ ಪರಸ್ಪರ ಚರ್ಚೆಗಳೊಂದಿಗೆ ಸಂಪೂರ್ಣ ತಿಳಿವಳಿಕೆಯನ್ನು ನಾವು ಸಾಧಿಸಿದ್ದೇವೆ" ಎಂದು ಮೊಮೆನ್ ಹೇಳಿದರು.
"ನಮ್ಮ ವಿಮೋಚನಾ ಯುದ್ಧದ ಬಳಿಕ ಭಾರತ ನಮ್ಮ ಅತಿದೊಡ್ಡ ಮಿತ್ರ ರಾಷ್ಟ್ರವಾಗಿದೆ. ಭಾರತ ಹಾಗೂ ಚೀನಾ ಈ ಎರಡೂ ದೇಶಗಳು ನಮ್ಮ ಉತ್ತಮ ಮಿತ್ರ ರಾಷ್ಟ್ರಗಳಾಗಿದ್ದು, ನಾವು ಆಪ್ತ ನೆರೆಹೊರೆಯವರಾಗಿದ್ದೇವೆ. ನಮ್ಮ ಅಭಿವೃದ್ಧಿಯಲ್ಲಿ ಎರಡೂ ದೇಶಗಳು ಪಾಲುದಾರರು" ಎಂದು ಅವರು ಹೇಳಿದ್ದಾರೆ.
"ಭಾರತ ಮತ್ತು ಚೀನಾ ನಡುವಿನ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಬಾಂಗ್ಲಾದೇಶ ಹಸ್ತಕ್ಷೇಪ ಮಾಡಬೇಕಾಗಿದೆ ಎಂದು ನಾನು ಭಾವಿಸುವುದಿಲ್ಲ. ಅವರು ರಕ್ಷಣಾ ಅಧಿಕಾರಿಗಳು ಮತ್ತು ವಿದೇಶಾಂಗ ಮಂತ್ರಿಗಳ ಮಟ್ಟದಲ್ಲಿ ಸಭೆಗಳನ್ನು ನಡೆಸುತ್ತಿರುವುದು ಭರವಸೆಯ ಕಿರಣ. ರಾಜತಾಂತ್ರಿಕ ಪರಿಹಾರಕ್ಕಾಗಿ ನಾವು ಆಶಿಸುತ್ತೇವೆ" ಎಂದು ಅಬ್ದುಲ್ ಮೊಮೆನ್ ಹೆಳಿದರು.
ಆದರೆ, ಭಾರತದ ಮಿತ್ರ ರಾಷ್ಟ್ರವಾಗಿರುವ ಬಾಂಗ್ಲಾದೇಶವನ್ನು ಸೆಳೆಯಲು ಚೀನಾ ಬಾಂಗ್ಲಾಕ್ಕೆ ಕೆಲವು ಸುಂಕ ವಿನಾಯಿತಿಗಳನ್ನು ನೀಡಿದೆ. ಆ ಮೂಲಕ ಬಾಂಗ್ಲಾದೆಶದ ವ್ಯಾಪಾರಕ್ಕೆ ಉತ್ತೇಜನ ನೀಡಿದೆ. ದ್ವಿಪಕ್ಷೀಯ ಸಂಬಂಧ ಸುಧಾರಿಸುವ ಕುರಿತು ಸಭೆ ನಡೆದ ಬಳಿಕ ಚೀನಾ ಈ ನಿರ್ಧಾರವನ್ನು ತಿಳಿಸಿದೆ.
ಭಾರತದ ಮೇಲೆ ಒತ್ತಡ ಹೇರುವ ಸಲುವಾಗಿ ಚೀನಾ ಬಾಂಗ್ಲಾದೇಶಕ್ಕೆ ಇಂತಹ ಸುಂಕ ವಿನಾಯಿತಿಯ ಅವಕಾಶವನ್ನು ನೀಡಿದೆ ಎಂದು ಭಾರತೀಯ ಮಾಧ್ಯಮಗಳು ವರದಿ ಮಾಡಿವೆ.
ಆದರೂ ಚೀನಾದೊಂದಿಗಿನ ಒಪ್ಪಂದದ ಬಗ್ಗೆ ಭಾರತ ಸರ್ಕಾರ ಏನೂ ಹೇಳದ ಕಾರಣ ನಮಗೆ ತುಂಬಾ ಸಂತೋಷವಾಗಿದೆ. ನಾವು ಭಾರತಕ್ಕೆ ಕೃತಜ್ಞರಾಗಿರುತ್ತೇವೆ ಎಂದು ವಿದೇಶಾಂಗ ಸಚಿವ ಎ.ಕೆ.ಅಬ್ದುಲ್ ಮೊಮೆನ್ ಹೆಳಿದ್ದಾರೆ.