ಇಸ್ಲಾಮಾಬಾದ್(ಪಾಕಿಸ್ತಾನ): ಬಾಲಿವುಡ್ ಅನ್ನು ನಕಲು ಮಾಡುವ ಬದಲು ಹೊಸ ವಿಷಯಗಳ ಬಗ್ಗೆ ಗಮನಹರಿಸಿ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ದೇಶದ ಚಲನಚಿತ್ರ ನಿರ್ಮಾಪಕರಿಗೆ ಒತ್ತಾಯಿಸಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ನಡೆದ ಕಿರುಚಿತ್ರೋತ್ಸವದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚಲನಚಿತ್ರ ನಿರ್ಮಾಣಕ್ಕೆ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಪಾಕಿಸ್ತಾನದ ಚಲನಚಿತ್ರೋದ್ಯಮವು ಬಾಲಿವುಡ್‌ನಿಂದ ಪ್ರಭಾವಿತವಾದ ಕಾರಣ ತಪ್ಪುಗಳು ನಡೆದಿವೆ ಎಂದು ಅಭಿಪ್ರಾಯಪಟ್ಟರು.
ನನ್ನ ಅನುಭವದ ಪ್ರಕಾರ ಸ್ವಂತಿಕೆ ಮಾತ್ರ ಮಾರಾಟವಾಗುತ್ತದೆ. ನಕಲು ಮಾಡುವುದಕ್ಕೆ ಯಾವುದೇ ಮೌಲ್ಯ ಇರುವುದಿಲ್ಲ. ಈ ವಿಚಾರವನ್ನು ಯುವ ಚಲನಚಿತ್ರ ನಿರ್ಮಾಪಕರಿಗೆ ಹೇಳಲು ಬಯಸುತ್ತೇನೆ ಎಂದು ಇಮ್ರಾನ್ ಯುವಕರಿಗೆ ಸಲಹೆ ನೀಡಿದ್ದಾರೆ.
ಕಮರ್ಷಿಯಲ್ ವಿಚಾರಗಳನ್ನು ಸೇರಿಸದ ಹೊರತು ಜನರು ಸಿನಿಮಾವನ್ನು ನೋಡುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ನಿಮ್ಮ ಸ್ವಂತ ಆಲೋಚನೆಯನ್ನು ಸಿನಿಮಾ ಆಗಿ ಹೊರತನ್ನಿ, ವೈಫಲ್ಯಕ್ಕೆ ಹೆದರಬೇಡಿ. ಸೋಲಿನ ಭಯದಲ್ಲಿರುವ ಯಾವುದೇ ವ್ಯಕ್ತಿ ಗೆಲ್ಲಲು ಸಾಧ್ಯವಿಲ್ಲ ಎಂದು ಇಮ್ರಾನ್ ಪಾಕ್ ಯುವಕರನ್ನು ಹುರಿದುಂಬಿಸಿದ್ದಾರೆ.
ಇದನ್ನೂ ಓದಿ:ಅಜೆಂಡಾವೊಂದರ ಭಾಗವಾಗಿ ದೂರು, ನನ್ನ ಧ್ವನಿ ಅಡಗಿಸುವ ಯತ್ನ: ನಟಿ ಆಯಿಷಾ ಆರೋಪ
ಈ ಸಂದರ್ಭದಲ್ಲಿ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್ಪಿಆರ್) ಮಹಾನಿರ್ದೇಶಕ ಮೇಜರ್ ಜನರಲ್ ಬಾಬರ್ ಇಫ್ತಿಕಾರ್ ಮಾತನಾಡಿ, ಪಾಕಿಸ್ತಾನದ ಗ್ರಹಿಕೆಯನ್ನು ಸುಧಾರಿಸುವ ಸಮಯ ಬಂದಿದೆ. ಈ ಚಲನಚಿತ್ರೋತ್ಸವವು ಆ ಪ್ರಯತ್ನದ ಒಂದು ಸಣ್ಣ ಭಾಗವಾಗಿದೆ. ನಿಜವಾದ ಪಾಕಿಸ್ತಾನವನ್ನು ತೋರಿಸುವ ಜವಾಬ್ದಾರಿಯನ್ನು ನಾವು ಯುವಕರಿಗೆ ಏಕೆ ನೀಡಬಾರದು? ಎಂದು ಪ್ರಶ್ನಿಸಿದ್ದಾರೆ.