ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್‌ಗೆ ಬರೆದ ಪತ್ರವೊಂದರಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹತ್ಯಾಕಾಂಡಕ್ಕೆ ವಿಧಿಸಿರುವ ನಿಷೇಧದಂತೆಯೇ ಇಸ್ಲಾಮೋಫೋಬಿಕ್ ವಿಷಯವನ್ನು ನಿಷೇಧಿಸಲು ಕೋರಿದ್ದಾರೆ.
ಈ ಪತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬೆಳೆಯುತ್ತಿರುವ ಇಸ್ಲಾಮೋಫೋಬಿಯಾ ಉಗ್ರವಾದ ಮತ್ತು ಹಿಂಸಾಚಾರವನ್ನು ಪ್ರಪಂಚದಾದ್ಯಂತ ಪ್ರೋತ್ಸಾಹಿಸುತ್ತಿದೆ. ವಿಶೇಷವಾಗಿ ಫೇಸ್ಬುಕ್ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಈ ಕೆಲಸ ನಡೆಯುತ್ತಿದೆ. ಆದ್ದರಿಂದ ಇಸ್ಲಾಮೋಫೋಬಿಯಾದ ಮೇಲೆ ನಿಷೇಧ ಹೇರಲು ನಾನು ನಿಮ್ಮನ್ನು ಕೇಳುತ್ತೇನೆ ಎಂದು ಜುಕರ್‌ಬರ್ಗ್‌ಗೆ ಮನವಿ ಮಾಡಿದ್ದಾರೆ.
ಹತ್ಯಾಕಾಂಡವನ್ನು ಟೀಕಿಸುವ ಅಥವಾ ಪ್ರಶ್ನಿಸುವ ಯಾವುದೇ ಪೋಸ್ಟ್ ಅನ್ನು ಫೇಸ್ಬುಕ್ನಲ್ಲಿ ನಿಷೇಧಿಸಿರುವ ಜುಕರ್‌ಬರ್ಗ್ ಅವರ ಹೆಜ್ಜೆಯನ್ನು ಶ್ಲಾಘಿಸುತ್ತೇನೆ ಎಂದು ಖಾನ್ ಹೇಳಿದ್ದಾರೆ.
ಹಲವಾರು ಸಂದರ್ಭಗಳಲ್ಲಿ ಇಮ್ರಾನ್ ಖಾನ್ ಇಸ್ಲಾಂ ಧರ್ಮದ ವಿರುದ್ಧದ ದ್ವೇಷವನ್ನು ಹತ್ಯಾಕಾಂಡದೊಂದಿಗೆ ಹೋಲಿಸಿದ್ದಾರೆ. ಕಳೆದ ವರ್ಷ, 74 ನೇ ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಅವರು ಮಾಡಿದ ಭಾಷಣದಲ್ಲಿ, ಪಾಶ್ಚಿಮಾತ್ಯ ಸಮಾಜದಲ್ಲಿ, ಹತ್ಯಾಕಾಂಡವನ್ನು ಸೂಕ್ಷ್ಮತೆಯಿಂದ ಪರಿಗಣಿಸಲಾಗುತ್ತದೆ. ಏಕೆಂದರೆ ಅದು ಯಹೂದಿ ಸಮುದಾಯವನ್ನು ನೋಯಿಸುತ್ತದೆ. ಆದ್ದರಿಂದ ನಾವು ಕೇಳುವ ಗೌರವವೂ ಅದೇ ಆಗಿದೆ. ನಮ್ಮ ಭಾವನೆಗಳನ್ನು ಕೆಡಿಸಬೇಡಿ. ನಾವು ಕೇಳುವುದು ಅಷ್ಟೆ ಎಂದು ಹೇಳಿದ್ದರು.