ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಈ ತಿಂಗಳು ರಷ್ಯಾಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಇದು 23 ವರ್ಷಗಳ ನಂತರ ಪಾಕಿಸ್ತಾನದ ಪ್ರಧಾನಿ ಅವರ ಮೊದಲ ಪ್ರವಾಸವಾಗಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ಈ ರಷ್ಯಾ ಭೇಟಿ ನಿಗದಿಯಾಗಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಭೇಟಿಯ ಸಂದರ್ಭದಲ್ಲಿ ಇಮ್ರಾನ್ ಖಾನ್ ಅವರ ಸಂಪುಟದ ಉನ್ನತ ಮಟ್ಟದ ಮಂತ್ರಿಗಳ ನಿಯೋಗ ಇರಲಿದೆ.
ಮಾರ್ಚ್ 1999 ರಲ್ಲಿ ಆಗಿನ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ರಷ್ಯಾಕ್ಕೆ ಭೇಟಿ ನೀಡಿದ ದೇಶದ ಕೊನೆಯ ಪ್ರಧಾನಿಯಾಗಿದ್ದರು. ಇಮ್ರಾನ್ ಖಾನ್ ಈಗಾಗಲೇ ಪುಟಿನ್ ಅವರಿಗೂ ಸಹ ಔಪಚಾರಿಕ ಆಹ್ವಾನ ನೀಡಿದ್ದಾರೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಕಳೆದ ತಿಂಗಳು ಪಾಕಿಸ್ತಾನದ ಪ್ರಧಾನಿ ತಮ್ಮ ದೂರವಾಣಿ ಸಂಭಾಷಣೆಯ ಸಮಯದಲ್ಲಿ ಆಹ್ವಾನವನ್ನು ಪುನರುಚ್ಚರಿಸಿದ್ದಾರಂತೆ.
ಪುಟಿನ್ ಅವರ ಭೇಟಿಯು ಕಳೆದ ಎರಡು ವರ್ಷಗಳಿಂದ ಚರ್ಚೆಯಲ್ಲಿದೆ. ಆದರೆ, COVID-19 ಸಾಂಕ್ರಾಮಿಕ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಕಾರ್ಯರೂಪಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಪಾಕಿಸ್ತಾನಿ ಪತ್ರಿಕೆ ವರದಿ ಮಾಡಿದೆ.